
ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತಾಗಿ ವೈದ್ಯಕೀಯ ಉಪಕರಣಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗುವುದು. ಜೊತೆಗೆ ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಸೂಕ್ತ ಸಚಿವಾಲಯಕ್ಕೆ ಮಾಹಿತಿ ರವಾನಿಸಲಾಗುವುದು ಎಂದು, ಮುಖ್ಯಮಂತ್ರಿ ಪರವಾಗಿ ಆಗಮಿಸಿದ್ದ ರಾಜ್ಯ ಸರ್ಕಾರದ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಮಂಗಳವಾರ ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದ ವೇಳೆ, ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಹೋರಾಟಗಾರರ ಅಹವಾಲುಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಹೋರಾಟಗಾರ ಅನಂತಮೂರ್ತಿ ಹೆಗಡೆ, ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿ ಕಳೆದ ಐದು ವರ್ಷಗಳಿಂದ ಸಮರ್ಪಕವಾಗಿ ಮುನ್ನಡೆಯದೆ ಕುಂಟುತ್ತಾ ಸಾಗುತ್ತಿದೆ ಎಂದು ಆರೋಪಿಸಿದರು. “ಆಸ್ಪತ್ರೆಯ ಕಾಮಗಾರಿ ಶೇಕಡಾ 80ರಷ್ಟನ್ನು ತಲುಪಿದ ಬಳಿಕ ಟೆಂಡರ್ ಕರೆಯಲಾಗುತ್ತದೆ ಎಂದು ಸರ್ಕಾರವೇ ಹೇಳಿತ್ತು. ಆದರೆ ಇಂದಿಗೂ ವೈದ್ಯಕೀಯ ಉಪಕರಣಗಳ ಟೆಂಡರ್ ಹಾಗೂ ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೇಲ್ದರ್ಜೆಗೇರಿಸಿರುವ 250 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭಿಸಬೇಕಾದರೆ ತಕ್ಷಣ ವೈದ್ಯರ ನೇಮಕ ಅಗತ್ಯ ಎಂದು ಅವರು ಆಗ್ರಹಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ಹೆಗಡೆ ಮಾತನಾಡಿ, “ನಾವು ಆಯ್ಕೆ ಮಾಡಿದ ಸರ್ಕಾರದ ವಿರುದ್ಧವೇ ಇಂದು ರಸ್ತೆಮಧ್ಯೆ ನಿಂತು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಆಸ್ಪತ್ರೆಯ ಬೇಡಿಕೆಗೆ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಜನರು ಇಲ್ಲಿವರೆಗೂ ಆಗಮಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯ, ನರ ಸಂಬಂಧಿತ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನರು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದರು.
ಮತ್ತೀಘಟ್ಟ ಭಾಗದ ಪಂಚಾಯತ್ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, “ಶಿರಸಿಯ ಆಸ್ಪತ್ರೆ ಸಂಪೂರ್ಣವಾಗಿ ಕಾರ್ಯಾರಂಭಿಸಿದರೆ ಸುತ್ತಮುತ್ತಲಿನ ಏಳೆಂಟು ತಾಲೂಕುಗಳ ಜನರಿಗೆ ದೊಡ್ಡ ಮಟ್ಟದ ಆರೋಗ್ಯ ಸೌಲಭ್ಯ ದೊರೆಯಲಿದೆ. ಈ ವಿಚಾರವನ್ನು ಸರ್ಕಾರ ತುರ್ತು ಆದ್ಯತೆಯಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಚಿದಾನಂದ ಹರಿಜನ ಮುಂಡಗೋಡು, ಮಂಜುನಾಥ ಕುಪ್ಪಗಡ್ಡೆ, ಅಂಕಿತ್ ಶಿರಸಿ, ಭೀಮಶಿ ವಾಲ್ಮೀಕಿ, ಬಸವರಾಜ ಹಸ್ಲರ್, ಶಂಕರಪ್ಪ, ರೈತ ಸಂಘದ ನೂರ್ ಅಹಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸರ್ಕಾರಕ್ಕೆ ಸಲ್ಲಿಸಿದ ಮನವಿಯ ಪ್ರಮುಖ ಅಂಶಗಳು
ಸರ್ಕಾರ 13-11-2020ರಂದು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ 250 ಹಾಸಿಗೆಗಳ ಮೇಲ್ದರ್ಜೆ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ 112 ಕೋಟಿ ರೂ. ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ 30 ಕೋಟಿ ರೂ. ಸೇರಿದಂತೆ ಒಟ್ಟು 142 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದೇಶದ ಪ್ರಕಾರ ಕಾಮಗಾರಿ ಶೇಕಡಾ 80 ಪೂರ್ಣಗೊಂಡ ಬಳಿಕ ಉಪಕರಣಗಳ ಟೆಂಡರ್ ಹಾಗೂ ತಜ್ಞ ವೈದ್ಯರ ನೇಮಕಾತಿ ನಡೆಯಬೇಕಿತ್ತು.
ಆದರೆ ಅನುದಾನ ಬಿಡುಗಡೆಯಾಗಿ ಐದು ವರ್ಷಗಳು ಕಳೆದರೂ, ಕಾಮಗಾರಿ ಶೇಕಡಾ 80ರಷ್ಟು ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಸಹ, ಇಂದಿಗೂ ಟೆಂಡರ್ ಅಥವಾ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ ಎಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಎಂಆರ್‌ಐ, ಸಿಟಿ ಸ್ಕ್ಯಾನ್, ಕಾರ್ಡಿಯೋಲಜಿ, ನ್ಯೂರೋಲಜಿ ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಹುಪಯೋಗಿಯಾಗುವ ಸೌಲಭ್ಯಗಳು ಈ ಆಸ್ಪತ್ರೆಯಿಂದ ದೊರೆಯಬೇಕಾಗಿತ್ತು. ಆದರೆ ಆಸ್ಪತ್ರೆ ಪೂರ್ಣ ಕಾರ್ಯಾರಂಭ ಮಾಡದಿರುವುದರಿಂದ ಜಿಲ್ಲೆಯ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳಲ್ಲಿ ಮಾರ್ಗಮಧ್ಯೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ನ್ಯೂರೋ ಸರ್ಜನ್ ಹಾಗೂ ಹೃದಯ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಕೊರತೆ ತೀವ್ರವಾಗಿದೆ. ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೇಲ್ದರ್ಜೆಗೇರಿಸಿದ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತಕ್ಷಣ ವೈದ್ಯಕೀಯ ಉಪಕರಣಗಳು ಹಾಗೂ ತಜ್ಞ ವೈದ್ಯರ ನೇಮಕಾತಿ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಸರ್ಕಾರವನ್ನು ಆಗ್ರಹಿಸಲಾಗಿದೆ.

