
ಭಟ್ಕಳ:ನಗರದಲ್ಲಿ ಮೊದಲ ಬಾರಿ ‘ಭಟ್ಕಳ ಉತ್ಸವ’ ಎಂಬ ವಿಶಿಷ್ಟ ಹಾಗೂ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉತ್ಸವದ ಸಂಪೂರ್ಣ ಮಾಹಿತಿಯನ್ನು ನೀಡಲು ಬುಧವಾರ ಬೆಳಗ್ಗೆ 11 ಗಂಟೆಗೆ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಮೇಶ್ ಖಾರ್ವಿ ಅವರು, ಡಿಸೆಂಬರ್ 25, 26, 27 ಹಾಗೂ 28ರಂದು ನಾಲ್ಕು ದಿನಗಳ ಕಾಲ ಭಟ್ಕಳ ಉತ್ಸವ ನಡೆಯಲಿದ್ದು, ಈ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಉತ್ಸವದ ಅಂಗವಾಗಿ ವಿವಿಧ ಮೇಳಗಳ ಪ್ರದರ್ಶನ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಹೇಳಿದರು.

ಭಟ್ಕಳ ಉತ್ಸವದ ಸಂಚಾಲಕರಾದ ಶ್ರೀಕಾಂತ್ ನಾಯ್ಕ್ ಮಾತನಾಡಿ, ಉತ್ಸವದಲ್ಲಿ ಕೃಷಿ ಹಾಗೂ ಸಾವಯವ ತರಕಾರಿ ಮೇಳ, ವಿವಿಧ ಆಹಾರ ಮೇಳ, ಸೀರೆ ಮತ್ತು ಉಡುಪು ವಸ್ತ್ರಗಳ ಮೇಳ, ಮತ್ಸ್ಯಮೇಳ, ವಿವಿಧ ಉದ್ಯಮಗಳ ಮಾಹಿತಿ ಕೇಂದ್ರ, ಐಸ್‌ಕ್ರೀಮ್ ಮೇಳ, ಗುಡಿ ಕೈಗಾರಿಕೆ ವಸ್ತುಗಳ ಮೇಳ, ಹಲಸಿನ ಹಣ್ಣಿನ ಮೇಳ ಸೇರಿದಂತೆ ಹಲವು ಆಕರ್ಷಕ ಮೇಳಗಳನ್ನು ಆಯೋಜಿಸಲಾಗಿದೆ ಎಂದರು. ಜೊತೆಗೆ ಅಮ್ಮ್ಯೂಸ್ಮೆಂಟ್ ಪಾರ್ಕ್ ಹಾಗೂ ವಾಲಿಬಾಲ್ ಕ್ರೀಡಾಕೂಟವೂ ಉತ್ಸವದ ಭಾಗವಾಗಿರಲಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯರು ಭಟ್ಕಳ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಜನಪ್ರಿಯ ಕನ್ನಡ ಕಲಾವಿದರಿಂದ ಸಂಗೀತ ರಸಮಂಜರಿ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಯುವಜನಮೇಳ, ಜಾನಪದ ಪ್ರದರ್ಶನಗಳು ಹಾಗೂ ಮಕ್ಕಳ ಪ್ರತಿಭಾ ಕಾರಂಜಿ ಮುಂತಾದ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸಲಿವೆ.
ಭಟ್ಕಳದ ಖಾಜಿಯಾ ಕಂಪೌಂಡ್, ಜಾಗಟೆಬೈಲು, ಎನ್‌ಎಚ್–66 ವೆಂಕಟಪುರ ಪ್ರದೇಶದಲ್ಲಿ ಉತ್ಸವ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಟ್ಕಳ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹಗಾರರು ಹಾಗೂ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ನಜೀರ್ ಕಾಸಿಂ ಜಿ, ವಿವಿಧ ಮೇಳಗಳ ಸಂಯೋಜಕರಾದ ಶ್ರೀಧರ್ ಮರುವಂತೆ, ಕ್ರಿಯಾಶೀಲ ಗೆಳೆಯರ ಸಂಘದ ಸದಸ್ಯರಾದ ಮನಮೋಹನ್ ನಾಯ್ಕ್, ದೀಪಕ್ ನಾಯ್ಕ್, ಪಾಂಡು ನಾಯ್ಕ್, ಭವಾನಿ ಶಂಕರ್, ವಿನಾಯಕ ಪಾಂಡುರಂಗ, ವೆಂಕಟೇಶ್ ಮೊಗೆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

