
ಭಟ್ಕಳ–ಹೊನ್ನಾವರ:ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಜಿ.ಶಂಕರ್ ಅವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ಇದೀಗ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಿದೆ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ.ಈ ಕುರಿತು ಮಾತನಾಡಿದ ಜಿ.ಜಿ.ಶಂಕರ್, “ನಾನು ಕಾನೂನುಬದ್ಧ ಉದ್ಯಮ ನಡೆಸಿಕೊಂಡು ಬಂದ ವ್ಯಕ್ತಿ. ಇಸ್ಪೀಟ್, ಜೂಜು ಅಥವಾ ಯಾವುದೇ ಅಕ್ರಮ ಚಟುವಟಿಕೆಗಳಿಗೆ ನಾನು ಕೈ ಹಾಕಿಲ್ಲ. ಆದರೂ ನನ್ನನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಇಬ್ಬರೂ ಒಟ್ಟಾಗಿ ಮಾತನಾಡಿ, “ಭೂ ವಿವಾದದ ಹಿನ್ನೆಲೆಯಲ್ಲಿನ ಸಣ್ಣ ಗಲಾಟೆಯನ್ನು ರಾಜಕೀಯ ದ್ವೇಷದಿಂದ ಕೊಲೆ ಯತ್ನ ಪ್ರಕರಣವಾಗಿ ಪರಿವರ್ತಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಸೇಡಿನ ರಾಜಕಾರಣದ ಭಾಗ” ಎಂದು ಆರೋಪಿಸಿದರು.

ವಿಶೇಷವಾಗಿ ಭಟ್ಕಳ–ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಒತ್ತಡದ ವಾತಾವರಣ ನಿರ್ಮಾಣವಾಗಿದ್ದು, ಇದರಲ್ಲಿ ಸಚಿವರ ಮಟ್ಟದ ರಾಜಕೀಯ ಹಸ್ತಕ್ಷೇಪವಿದೆ ಎಂಬ ಗಂಭೀರ ಆರೋಪವನ್ನು ಸುನೀಲ ನಾಯ್ಕ ಮುಂದಿಟ್ಟರು.
“ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೂಂಡಾಗಿರಿ ಸಹಿಸುವುದಿಲ್ಲ. ಅಮಾಯಕ ಉದ್ಯಮಿಗಳು ಹಾಗೂ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ನಾನು ಮೌನವಾಗಿರುವುದಿಲ್ಲ” ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದರು. ಹಿಂದಿನ ಶಾಸಕರ ಕಾಲದಲ್ಲಿ ಇಂತಹ ದ್ವೇಷದ ರಾಜಕಾರಣ ಇರಲಿಲ್ಲ ಎಂದು ಅವರು ಹೇಳಿದ್ದು, ಮಂಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲೇ ಜನರು ಅಹಂಕಾರದ ರಾಜಕಾರಣಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು. ಇದೇ ರೀತಿಯ ಪೊಲೀಸ್ ನಡೆ ಮುಂದುವರಿದರೆ ಸಾವಿರಾರು ಕಾರ್ಯಕರ್ತರೊಂದಿಗೆ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಇನ್ನೊಂದೆಡೆ, ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುವ ನಾಗರತ್ನ ಹಳ್ಳೇರ್ ಅವರು ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೂರು ನೀಡಲು ಹೋದಾಗ ಹಗುರವಾಗಿ ಮಾತನಾಡಿ, ರಾತ್ರಿ ಪೂರ್ತಿ ಠಾಣೆಯಲ್ಲಿ ಕೂರಿಸಿ ದೂರು ಸ್ವೀಕರಿಸದೇ ಮಾನಸಿಕ ಹಿಂಸೆ ನೀಡಲಾಗಿದೆ” ಎಂದು ಅವರು ದೂರಿದ್ದಾರೆ.

ಘಟನೆಯ ಹಿನ್ನೆಲೆ:
ಡಿಸೆಂಬರ್ 9ರಂದು ಹೊನ್ನಾವರ ಸಮೀಪದ ಮಾವಿನಕೂರ್ವಾ–ಮಂಡಲಕೂರ್ವ ಪ್ರದೇಶದಲ್ಲಿ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಎಂಬವರು ಕೂಲಿ ಕೆಲಸಕ್ಕೆ ತೆರಳಿದ ವೇಳೆ ಹಲ್ಲೆಗೆ ಒಳಗಾಗಿದ್ದರು. ಅವರ ತಂದೆ ಬಸ್ತೇಂವ್ ಮೆಂಡೋನ್ಸಾ ಹಾಗೂ ಪಾವ್ಲು ಡಿಕೋಸ್ತಾ ಅವರ ಮೇಲೂ ದಾಳಿ ನಡೆದಿದೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಆರೋಪದೊಂದಿಗೆ ಜಿ.ಜಿ.ಶಂಕರ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಇದಕ್ಕೆ ಪ್ರತಿಯಾಗಿ, ಸೇಫ್ ಸ್ಟಾರ್ ಸೊಸೈಟಿಯ ಉದ್ಯೋಗಿ ನಾಗರತ್ನ ಹಳ್ಳೇರ್ ಅವರು ತಮಗೆ ಬೆದರಿಕೆ ಇದೆ ಎಂದು ದೂರು ನೀಡಿದ್ದರು. ನಂತರ ಡಿಸೆಂಬರ್ 11ರಂದು ಅಳ್ಳಂಕಿ ಶಾಖೆಯ ಫೀಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಮತ್ತೊಂದು ಪ್ರಕರಣವೂ ದಾಖಲಾಗಿತ್ತು.ಈ ಎಲ್ಲ ಬೆಳವಣಿಗೆಗಳ ನಡುವೆ, ಬಿಜೆಪಿ ನಾಯಕರು ಜಿ.ಜಿ.ಶಂಕರ್ ಅವರ ಪರವಾಗಿ ನಿಂತು, ಈ ಪ್ರಕರಣವನ್ನು ರಾಜಕೀಯ ದ್ವೇಷದ ಫಲವಾಗಿ ಬಣ್ಣಿಸುತ್ತಿರುವುದು ಸ್ಥಳೀಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
