
ಶಿರಸಿ:ಶ್ರೀ ಮಾರಿಕಾಂಬಾ ದೇವಿಯ ಕಳೆದ ಜಾತ್ರೆಗೆ ಸಂಬಂಧಿಸಿ ಜಾತ್ರಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆ ಸಂಪೂರ್ಣ ಅಸತ್ಯ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ. ಜಾತ್ರೆಗೆಂದು ಕೇಳಲಾಗಿದ್ದ 5 ಕೋಟಿ ರೂಪಾಯಿ ಅನುದಾನ ರಾಜ್ಯ ಸರ್ಕಾರದಿಂದ ಬಂದಿಲ್ಲ ಎಂಬುದು ಅಧಿಕೃತ ದಾಖಲೆಗಳಿಂದಲೇ ಸ್ಪಷ್ಟವಾಗಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಾಸಕ ಭೀಮಣ್ಣ ನಾಯ್ಕ ಅವರು ಜಾತ್ರೆಗೆಂದು 5 ಕೋಟಿ ರೂಪಾಯಿ ಅನುದಾನ ಕೇಳಿದ್ದರು. ಆದರೆ ಆ ಹಣ ಬಿಡುಗಡೆ ಆಗಿಲ್ಲ ಎಂಬುದು ಆರ್‌ಟಿಐ ಮೂಲಕ ಸಾರ್ವಜನಿಕವಾಗಿ ತಿಳಿದುಬಂದಿದೆ. ನಗರಸಭೆ ಅಧ್ಯಕ್ಷರೂ ಕೂಡ ಜಾತ್ರೆಗೆ ವಿಶೇಷ ಅನುದಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ” ಎಂದರು.ಕಾಂಗ್ರೆಸ್ ಮುಖಂಡರು 3.5 ಕೋಟಿ ರೂಪಾಯಿ ಅನುದಾನ ಬಂದಿದೆ ಎಂದು ಹೇಳುತ್ತಿರುವುದು ಯಾವ ಶೀರ್ಷಿಕೆಯಡಿ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, “ಒಂದು ವೇಳೆ ಜಾತ್ರೆಗೆಂದು ಅನುದಾನ ಬಂದಿದ್ದರೆ, ಅದರಲ್ಲಿ ಸಿದ್ದಾಪುರದ ವಿವಿಧ ಕಾಮಗಾರಿಗಳಿಗೆ 3 ಕೋಟಿ ರೂಪಾಯಿ ವ್ಯಯ ಮಾಡಿದಂತೆ ಹೇಳುವುದು ಹೇಗೆ ಸಾಧ್ಯ? ಸಿದ್ದಾಪುರಕ್ಕೆ ಬಂದ ಅನುದಾನ ಬೇರೆ, ಜಾತ್ರಾ ಅನುದಾನ ಬೇರೆ. ಇದನ್ನು ಗೊಂದಲಗೊಳಿಸುವುದು ದೇವಿಗೆ ಅಪಚಾರ ಮಾಡಿದಂತಾಗಿದೆ” ಎಂದು ಟೀಕಿಸಿದರು.
5 ಕೋಟಿ ಅನುದಾನದ ಸತ್ಯ ಜನತೆಗೆ ತಿಳಿಸಲಿ
ಜಾತ್ರೆಗೆಂದು 5 ಕೋಟಿ ತಂದಿದ್ದೇವೆ ಎಂದು ಕಾಂಗ್ರೆಸ್ ಪಕ್ಷವು ಪತ್ರಿಕಾ ಹೇಳಿಕೆ, ಜಾಹೀರಾತು ಹಾಗೂ ಪ್ಲೆಕ್ಸುಗಳನ್ನು ಹಾಕಿತ್ತು. ಆದರೆ ಅನುದಾನ ಬಂದಿಲ್ಲ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ, “ಒಂದು ವೇಳೆ ಹಣ ಬಿಡುಗಡೆಯಾಗಿದ್ದರೆ ಉಳಿದ 1.5 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು ಎಂಬುದಕ್ಕೂ ಶಾಸಕರು ಉತ್ತರಿಸಬೇಕು” ಎಂದು ಪ್ರಶ್ನಿಸಿದರು.

“ಬೆದರಿಕೆಗೆ ಜಗ್ಗುವವನು ನಾನು ಅಲ್ಲ”
ಮಾಜಿ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಂತಮೂರ್ತಿ ಹೆಗಡೆ, “ನಾನು ಯಾವುದೇ ಅಧಿಕೃತ ದಾಖಲೆ ಇಲ್ಲದೇ ಒಂದಕ್ಷರವೂ ಮಾತನಾಡುವುದಿಲ್ಲ. ನಿಮ್ಮ ಬೆದರಿಕೆ ರಾಜಕಾರಣಕ್ಕೆ ನಾನು ಜಗ್ಗುವವನಲ್ಲ. ಹುಟ್ಟು ಉಚಿತ, ಸಾವು ಖಚಿತ – ಭಯ ಇದ್ದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ” ಎಂದು ಕಠಿಣ ಎಚ್ಚರಿಕೆ ನೀಡಿದರು.ಗಣೇಶ ನಗರದ ರಸ್ತೆಯನ್ನು ತಿಂಗಳುಗಟ್ಟಲೇ ಅಗೆದು ಬಿಟ್ಟಿರುವ ವಿಚಾರ ಉಲ್ಲೇಖಿಸಿದ ಅವರು, “ಅಲ್ಲಿ ಜನರು ದಿನನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಶ್ನೆ ಕೇಳುವವರಿಗೆ ಧ್ವನಿ ಎತ್ತುವ ಬದಲು ಜನರ ಕೆಲಸ ಮಾಡಿ” ಎಂದು ಸಲಹೆ ನೀಡಿದರು.
ಶಾಸಕರ ಮಾತಿಗೆ ಅಧಿಕಾರಿಗಳೂ ಬೆಲೆ ಕೊಡುತ್ತಿಲ್ಲ:
ಕ್ಷೇತ್ರದ ಶಾಸಕರ ಮಾತನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂಬ ಆರೋಪ ಮಾಡಿರುವ ಅನಂತಮೂರ್ತಿ ಹೆಗಡೆ, “ರೈತರ ತೋಟ ನಾಶ ಮಾಡಿದ ಅರಣ್ಯಾಧಿಕಾರಿಗಳು ಶಾಸಕರ ಎದುರೇ ದರ್ಪ ತೋರುತ್ತಿದ್ದಾರೆ. ಇದರಿಂದ ಶಾಸಕರು ಅಧಿಕಾರಿಗಳ ಮೇಲಿನ ಹಿಡಿತ ಕಳೆದುಕೊಂಡಿರುವುದು ಸ್ಪಷ್ಟ” ಎಂದರು.
ಕರಾವಳಿ ಉತ್ಸವದ ವೇದಿಕೆಯಲ್ಲಿ ಡಿಸಿಎಂ ಬೇಡಿ–ಅಘನಾಶಿನಿ ಯೋಜನೆ ಜಾರಿ ಮಾಡುವ ಹೇಳಿಕೆಗೆ ಸಹ ಸ್ಥಳೀಯ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸದಿರುವುದನ್ನು ಅವರು ಪ್ರಶ್ನಿಸಿದರು.
ಆಸ್ಪತ್ರೆ ಸೌಲಭ್ಯಗಳ ಕೊರತೆಯಿಂದ ಜನರಿಗೆ ಸಂಕಷ್ಟ
ಕ್ಷೇತ್ರದ ಸರ್ಕಾರಿ ಆಸ್ಪತ್ರೆ ಕುರಿತು ಮಾತನಾಡಿದ ಅವರು, “ಹಿಂದಿನ ಶಾಸಕರು ಆರಂಭಿಸಿದ್ದ ಆಸ್ಪತ್ರೆ ಇಂದಿಗೂ ಪೂರ್ಣ ಕಾರ್ಯಾರಂಭ ಮಾಡಿಲ್ಲ. ವೈದ್ಯಕೀಯ ಉಪಕರಣಗಳ ಕೊರತೆಯಿಂದ ಬಡವರು ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಸಳೂರು ಸಮೀಪದ ಶಶಿಧರ ಗೌಡ, “ವೆಂಟಿಲೇಟರ್ ಸೌಲಭ್ಯ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಸಾಲ ಮಾಡಿಕೊಂಡು ಚಿಕಿತ್ಸೆ ಮಾಡಿಸಬೇಕಾಯಿತು. ಹಣದ ಕೊರತೆಯಿಂದ ಮತ್ತೆ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಸೌಲಭ್ಯ ಇಲ್ಲ ಎಂದು ಹೇಳಿ ಮನೆಗೆ ಕಳುಹಿಸಿದರು. ಮನೆಗೆ ಬಂದ ಒಂದು ದಿನದಲ್ಲೇ ಮಗ ಸಾವನ್ನಪ್ಪಿದ” ಎಂದು ನೋವು ತೋಡಿಕೊಂಡರು.
ಅಭಿವೃದ್ಧಿ ವಿಚಾರದಲ್ಲಿ ಸವಾಲು:
ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ನಡೆದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅನಂತಮೂರ್ತಿ ಹೆಗಡೆ, “ಗುದ್ದಲಿ ಪೂಜೆ ಮಾಡಿರುವ ಎಲ್ಲ ಕಾಮಗಾರಿಗಳಿಗೆ ಪತ್ರಕರ್ತರೊಂದಿಗೆ ಭೇಟಿ ನೀಡಿ, ಎಷ್ಟು ಪ್ರಮಾಣದಲ್ಲಿ ಕೆಲಸ ನಡೆದಿದೆ ಎಂಬುದನ್ನು ಪರಿಶೀಲಿಸೋಣ. ಸತ್ಯ ಜನತೆಗೆ ಗೊತ್ತಾಗುತ್ತದೆ” ಎಂದು ಸವಾಲು ಹಾಕಿದರು.

