
ಯಾಣ / ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಯಾಣದತ್ತ ತೆರಳುತ್ತಿದ್ದ ದಾವಣಗೆರೆಯ ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಬಸ್, ಹಸೆಮನೆ ನುಜ್ಜಗಿ ಕ್ರಾಸ್ ಸಮೀಪ ಮಂಗಳವಾರ ರಸ್ತೆ ಅಪಘಾತಕ್ಕೀಡಾಗಿ ಪಲ್ಟಿಯಾದ ಪರಿಣಾಮ 19 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾವಣಗೆರೆಯ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 50ಕ್ಕೂ ಹೆಚ್ಚು ಜನರು ಈ ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಶಿರಸಿ ಮಾರಿಕಾಂಬಾ ದೇವಸ್ಥಾನದ ದರ್ಶನ ಮುಗಿಸಿ ಯಾಣದತ್ತ ಸಾಗುತ್ತಿದ್ದ ಸಂದರ್ಭ, ಹಸೆಮನೆ ನುಜ್ಜಗಿ ಕ್ರಾಸ್‌ನ ತೀವ್ರ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಘಟನೆ ನಡೆದಿದೆ.ಅಪಘಾತದ ವೇಳೆ ಬಸ್‌ನೊಳಗಿದ್ದ ವಿದ್ಯಾರ್ಥಿಗಳಲ್ಲಿ 19 ಮಂದಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಶಬ್ದ ಕೇಳಿ ಸ್ಥಳೀಯರು ಹಾಗೂ ದಾರಿಹೋಕರು ತಕ್ಷಣವೇ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರವಾಸದ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳ ತಂಡಕ್ಕೆ ಈ ಅಕಸ್ಮಿಕ ಅಪಘಾತ ಆತಂಕ ಹಾಗೂ ದುಃಖದ ವಾತಾವರಣವನ್ನು ಸೃಷ್ಟಿಸಿದೆ.

