ಕುಮಟಾ: ಸಾರ್ವಜನಿಕ ರಸ್ತೆ, ಕಡಲತೀರ ಹಾಗೂ ಸರ್ಕಾರಿ ಭೂಮಿ ಅತಿಕ್ರಮಿಸಿ ರೆಸಾರ್ಟ ಹಾಗೂ ಹೋಂ ಸ್ಟೇ ನಡೆಸುತ್ತಿರುವವರ ವಿರುದ್ಧ ಗುರುವಾರ ನಾಡುಮಾಸ್ಕೇರಿ ಗ್ರಾ ಪಂ ಸದಸ್ಯರು ಕಿಡಿಕಾರಿದ ಬೆನ್ನಲ್ಲೆ ಅಧಿಕಾರಿಗಳು ಸ್ಥಳ ಭೇಟಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹಾಗೂ ತಹಶೀಲ್ದಾರ್ ಸತೀಶ ಗೌಡ ಕಡಲತೀರಗಳಿಗೆ ತೆರಳಿ ಅನಧಿಕೃತ ಮಳಿಗೆಗಳನ್ನು ಲೆಕ್ಕ ಮಾಡಿದರು.
ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಗಂಗೆಕೊಳ್ಳ ಹಾಗೂ ನಾಡುಮಾಸ್ಕೇರಿಯಲ್ಲಿ ಅಧಿಕಾರಿಗಳು ಸಂಚಾರ ನಡೆಸಿದರು. ಯಾವ ಯಾವ ರೆಸಾರ್ಟ ಎಷ್ಟು ಕ್ಷೇತ್ರದಲ್ಲಿದೆ? ಯಾರ ಹೆಸರಿನಲ್ಲಿ ನೊಂದಣಿ ಆಗಿದೆ? ಎಂದು ಮಾಹಿತಿ ಪಡೆದರು. ಈ ಬಗ್ಗೆ ಖಚಿತ ಮಾಹಿತಿ ಸಿಗದ ಕಾರಣ ಕ್ಷೇತ್ರದ ಸರ್ವೇ ನಡೆಸಿ ಎರಡು ದಿನದಲ್ಲಿ ವರದಿ ನೀಡುವಂತೆ ಭೂ ಮಾಪನಾ ಇಲಾಖೆಗೆ ಸೂಚಿಸಿದರು. `ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡಗಳಿದ್ದರೆ ಅದನ್ನು ತೆರವು ಮಾಡಲಾಗುವುದು’ ಎಂದು ಈ ವೇಳೆ ತಿಳಿಸಿದರು.
ಅಕ್ರಮ ರೆಸಾರ್ಟ ಹಾಗೂ ಹೋಂ ಸ್ಟೇ’ಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಜನರ ಓಡಾಟಕ್ಕೂ ಇದರಿಂದ ಸಮಸ್ಯೆಯಾಗಿದೆ’ ಎಂದು ಗ್ರಾಮ ಪಂಚಾಯತಗೆ ಅನೇಕರು ದೂರು ಸಲ್ಲಿಸಿದ್ದರು. ಹೀಗಾಗಿ ಗ್ರಾಮ ಪಂಚಾಯತ ಸದಸ್ಯರು ಈ ಬಗ್ಗೆ ವಿವಿಧ ಇಲಾಖೆಗೆ ಪತ್ರ ಬರೆದಿದ್ದು, ಗುರುವಾರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಯದೇ ಇದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದ್ದರು.