ದಾಂಡೇಲಿ: ಕಾಡಿನಿಂದ ಕಟ್ಟಿಗೆ ತಂದ ವ್ಯಕ್ತಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದ ಉಪ ಅರಣ್ಯಾಧಿಕಾರಿ ಯಲ್ಲಪ್ಪ ತುಳಸಿಗೆರಿ ಕಲಾಲ ಹಾಗೂ ಅರಣ್ಯ ರಕ್ಷಕ ಶಿವ ಶರಣ ಎಂಬಾತರಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.
ಜೋಯಿಡಾ ತಾಲೂಕಿನ ಹೊಸಕೊಣಪ ಗ್ರಾಮದ ಸುನೀಲ ಕಾಂಬಳೆ ಅವರು ತಮ್ಮ ಮನೆ ರಿಪೇರಿ ಮಾಡುವ ಸಲುವಾಗಿ ಇಟ್ಟಂಗಿ ಸುಡಲು ಅರಣ್ಯದಲ್ಲಿ ಬಿದ್ದ ಕಟ್ಟಿಗೆ ತಂದಿದ್ದರು. ಕರಮಳ್ ಮರದ ಟೊಂಗೆ ನೋಡಿದ ಈ ನೌಕರರು ಸುನೀಲ ಅವರನ್ನು ಹೆದರಿಸಿ 10 ಸಾವಿರ ರೂ ಲಂಚ ಬೇಡಿದ್ದರು. ಹಣ ಕೊಡದೇ ಇದ್ದರೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಮೂರು ಕಾಸಿನ ಪ್ರಯೋಜನಕ್ಕಿಲ್ಲದ ಕಟ್ಟಿಗೆ ತಂದಿರುವುದಕ್ಕೂ 10 ಸಾವಿರ ರೂ ಬೇಡಿದ ಅಧಿಕಾರಿಗಳ ವಿರುದ್ಧ ಸುನೀಲ ತಿರುಗಿಬಿದ್ದರು.
ಈ ಬಗ್ಗೆ ಸುನೀಲ ಅವರು ಕಾರವಾರದ ಭ್ರಷ್ಟಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದಾಂಡೇಲಿಯ ಶಿತಲ್ ಕೋಲ್ಡ್ ಡ್ರಿಂಕ್ಸ್ನಲ್ಲಿ 5 ಸಾವಿರ ರೂ ಹಣ ಪಡೆಯುವಾಗ ಸರ್ಕಾರಿ ನೌಕರರು ಸಿಕ್ಕಿ ಬಿದ್ದರು. ವಾದ ಆಲಿಸಿದ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಡಿ ಎಸ್ ವಿಜಯ ಕುಮಾರ್ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದರು.