ಭಟ್ಕಳ :ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ದನಗಳ ಮಾರಣಹೋಮ ಸೈಲೆಂಟಾಗಿ ನಡೆಯುತ್ತಿರುವ ಅನುಮಾನ ಮೂಡಿದೆ. ಭಟ್ಕಳದ ಮುಗ್ದಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ನೂರಾರು ದನಗಳ ಮೂಳೆಗಳು ಪತ್ತೆಯಾಗಿದ್ದು, ಈ ಪ್ರದೇಶ ದನಗಳ ಹತ್ಯೆಯ ಸಾಕ್ಷಿಯಾಗಿರುವುದು ಸ್ಥಳೀಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ಹಾಗೂ ಹಿಂದೂ ಮುಖಂಡರ ಮಾಹಿತಿ ಪ್ರಕಾರ, ಕಳೆದ ಎರಡು ಮೂರು ದಿನಗಳಲ್ಲೇ ದನಗಳನ್ನು ಹತ್ಯೆ ಮಾಡಿ, ಅವುಗಳ ರಕ್ತದ ಕಲೆಗಳು, ಮೂಳೆಗಳನ್ನು ಗುಡ್ಡದ ಮೇಲೆಯೇ ಎಸೆದು ಹಾಕಿರುವ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಹಿಂದೆ ಪೊಲೀಸರು ನಾಕಾಬಂದಿ ನಡೆಸಿ ದನಗಳ್ಳರನ್ನು ಬಂಧಿಸಿದರೂ, ದನಗಳ ಪೂರೈಕೆ ಅಡ್ಡಿಯಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಘಟನೆಯ ಮಾಹಿತಿಯನ್ನು ತಿಳಿದು ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಸ್ಥಳಕ್ಕೆ ತೆರಳಿದಾಗ, ಪುರಸಭೆ ಸಿಬ್ಬಂದಿ ಮೂಳೆಗಳನ್ನು ವೇಸ್ಟೇಜ್ ಟ್ಯಾಂಕ್ಗೆ ಹಾಕಿ ತೆರವುಗೊಳಿಸಿರುವುದು ಗಮನಕ್ಕೆ ಬಂದಿದೆ. ಆದರೆ ಭಾರೀ ಪ್ರಮಾಣದ ಮೂಳೆಗಳು ಪತ್ತೆಯಾಗಿರುವುದರಿಂದ ಈ ಕಾರ್ಯಾಚರಣೆಯ ಹಿಂದೆ ದೊಡ್ಡ ಮಟ್ಟದ ಗೋಹತ್ಯೆ ಮಾಫಿಯಾ ಇರುವ ಸಾಧ್ಯತೆಯ ಶಂಕೆ ವ್ಯಕ್ತವಾಗಿದೆ.
ಭಟ್ಕಳದಲ್ಲಿ ನಡೆಯುತ್ತಿರುವ ಈ ಸೈಲೆಂಟ್ ಆಗಿ ನಡೆಯುತ್ತಿರುವ ದನಗಳ ಮಾರಣಹೋಮ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿದೆ.. ಈ ಘಟನೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಗೋಹತ್ಯೆ ಪ್ರಕರಣದ ಹಿಂದೆ ಯಾರ ಬೆಂಬಲವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.