ಸ್ಮಶಾನದಲ್ಲಿ ಸುಂದರ ಯುವತಿಯ ಪೋಟೋ ಇಟ್ಟು ವಶೀಕರಣ ವಾಮಾಚಾರ – ಬೆಚ್ಚಿಬಿದ್ದ ಯುವತಿ ಕುಟುಂಬಸ್ಥರು
ದೊಡ್ಡಬಳ್ಳಾಫುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ಎಸ್‌ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಸಮಾಧಿಯ ಬಳಿ ಅಪರಿಚಿತ ಯುವತಿಯ ಪೋಟೋ ಇಟ್ಟು, ರಂಗೋಲಿ ಹಾಕಿ ವಶೀಕರಣ ಎಂದು ಬರೆದು ವಾಮಾಚಾರ ಮಾಡಿದ ಘಟನೆ ನಡೆದಿದೆ.
ಗ್ರಾಮದ ಹೊರಭಾಗದ ಸ್ಮಶಾನದಲ್ಲಿ ಬಳಿ ಕುರಿಗಾಹಿಗಳು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ತೆಂಗಿನಕಾಯಿ, ಎಲೆ, ಅಡಿಕೆ, ಕಡ್ಡಿ, ಕರ್ಪೂರ, ವಿವಿಧ ಬರಹಗಳು, ಸಾಲದೆಂಬಂತೆ ಅಲ್ಲೊಂದು ಸುಂದರ ಯುವತಿಯ ಪೋಟೋ ಕೂಡ ಇಟ್ಟಿದ್ದಾರೆ. ಯಾರು ಪೂಜೆ ಮಾಡಿದ್ದಾರೆ ಅಂತ ಸಮೀಪಕ್ಕೆ ಹೋಗಿ ನೋಡಿದ ಗ್ರಾಮಸ್ಥರಿಗೆ ಸುಂದರ ಯುವತಿಯ ಫೋಟೋ ಕಾಣಿಸಿದೆ. ಅದನ್ನು ನೋಡಿ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ರಂಗೋಲಿಯಲ್ಲಿ ವಶೀಕರಣ ಎಂದು ಕನ್ನಡದಲ್ಲಿ ಬರೆಯಲಾಗಿದೆ.
ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದರು, ಮೃತಪಟ್ಟವರ ಸಮಾಧಿಯ ಬಳಿ ವಶೀಕರಣದ ಪೂಜೆ ಮಾಡಿರುವುದು ಮಂಜುನಾಥ್ ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.
ಮಂಜುನಾಥ್ ಕುಟುಂಬದವರ ಮೇಲೆ ವೈಯಕ್ತಿಕ ದ್ವೇಷವಿರುವ ವ್ಯಕ್ತಿಗಳು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಗ್ರಾಮದಲ್ಲಿ ಆಶಾಂತಿಯ ವಾತಾವರಣ ಸೃಷ್ಟಿ ಮಾಡಲು ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿರುತ್ತಾರೆ ಎಂಬ ಸಂಶಯವು ಇದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.