*ಮಂಗಳೂರಿನಲ್ಲಿ ಗಾಂಜಾ ಮಾರಾಟ: ಖಾಸಗಿ ಮೆಡಿಕಲ್ ಕಾಲೇಜಿನ ವೈದ್ಯರು, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಸಹಿತ 10 ಮಂದಿಯ ಬಂಧನ*
ಮಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲೆಂಡ್‌ನ ಪ್ರಜೆ ನೀಲ್‌ಕಿಶೋರ್ ರಾಮ್‌ಜಿ ಷಾ (38), ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧಿಕಾರಿಯಾಗಿರುವ ಕೇರಳದ ಡಾ.ಸಮೀರ್ (32), ವೈದ್ಯಕೀಯ ಶಸ್ತ್ರಚಿಕಿತ್ಸಕ, ತಮಿಳುನಾಡಿನ ಡಾ.ಮಣಿಮಾರನ್ ಮುತ್ತು (28), ವೈದ್ಯ ವಿದ್ಯಾರ್ಥಿನಿ ಕೇರಳದ ನದಿಯಾ ಸಿರಾಜ್ (24), ಮಹಾರಾಷ್ಟ್ರದ ಪುಣೆಯ ಇರಾ ಬಾಸಿನ್ (23), ಪಂಜಾಬಿನ ಚಂಡೀಗಡದ ರಿಯಾ ಚಡ್ಡಾ (22), ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ (26), ವೈದ್ಯ ವಿದ್ಯಾರ್ಥಿಗಳಾದ ಚಂಡೀಗಡದ ಭಾನು ದಹಿಯಾ (27), ದೆಹಲಿಯ ಕ್ಷಿತಿಜ್ ಗುಪ್ತ (25) ಹಾಗೂ ಬಂಟ್ವಾಳ ತಾಲ್ಲೂಕಿನ ಮಾರಿಪಳ್ಳದ ಮಹಮ್ಮದ್ ರವೂಫ್ ಅಲಿಯಾಸ್ ಗೌಸ್ (34) ಬಂಧಿತರು ಎಂದು ಅವರು ತಿಳಿಸಿದರು.
ಜ.7ರಂದು ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್ .ಎಂ. ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದೆ. ಆತನಿಂದ ಒಟ್ಟು 2 ಕೆ.ಜಿ. ತೂಕದ ರೂ. 50,000 ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, 7,000 ರೂ., ಡಿಜಿಟಲ್ ತೂಕ ಮಾಪನ, ಆಟಿಕೆ ಪಿಸ್ತೂಲು ವಶಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ನಗರದ ವಿವಿಧ ಹಾಸ್ಟೆಲ್, ಪಿಜಿ ಹಾಗೂ ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.