ವಿಜೃಂಭಣೆಯಿಂದ ನೆರವೇರಿದ ಭಟ್ಕಳದ ರಾಜಾಂಗಣ ನಾಗಬನದ ಪುನರ್ ಪ್ರತಿಷ್ಠಾಪನಾ ಮಹೋತ್ಸವ- ನಾಗಬನ ಸಮಿತಿಯಿಂದ ಶಾಸಕ ಸುನೀಲ್ ನಾಯ್ಕ ಗೆ ಸನ್ಮಾನ
ಭಟ್ಕಳ -ಪಟ್ಟಣದ ರಾಜಾಂಗಣ ನಾಗಬನದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಮುಂಜಾನೆ ನಿತ್ಯವಿಧಿಸಹಿತ ಅಶ್ಲೇಷ ಬಲಿ, ದೇವರಿಗೆ ಕುಂಬಾಭಿಷೇಕ ನಡೆಸಿ ನಂತರ ಅಲಂಕಾರ ಪೂಜೆ ಮಾಡಿ ಹಣ್ಣುಕಾಯಿ ನೈವೇದ್ಯ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರು ದೇಗುಲಕ್ಕೆ ಅಗತ್ಯ ಇರುವ ಜಾಘಂಟೆ, ಘಂಟೆ ಹಾಗೂ ಕಾಲುದೀಪಗಳನ್ನು ದೇಣಿಗೆಯಾಗಿ ಅರ್ಪಿಸಿದರು. ಮೀನುಗಾರ ಮಹಿಳೆಯರು ಕಾಣಿಕೆ ಡಬ್ಬಿಯನ್ನು ದೇಣಿಗೆಯಾಗಿ ನೀಡಿದರು. ಕೆಲಭಕ್ತರು ಚಿನ್ನ ಹಾಗೂ ಬೆಳ್ಳಿಯನ್ನು ಕೂಡ ಒಪ್ಪಿಸಿದರು. ನೂರಾರು ಕಾರ್ಯಕರ್ತರು ಸ್ವಯಂ ಸೇವಕರಾಗಿ ಸ್ಥಳದಲ್ಲಿ ಹಾಜರಿದ್ದು ಅನ್ನಸಂತರ್ಪಣೆಯಲ್ಲಿ ನೂಕುನುಗ್ಗಲು ಆಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು. ಅನ್ನಸಂತರ್ಪಣೆಯ ಸಂದರ್ಭದಲ್ಲಿ ಚೌಡೇಶ್ವರಿ ಮಹಿಳಾ ಭಜನಾ ತಂಡದವರು ನಡೆಸಿಕೊಂಡ ಭಜನಾ ನೃತ್ಯ ಜನಮನಸೂರೆಗೊಂಡಿತು.
ಮುಖ್ಯ ರಸ್ತೆಯನ್ನು ಬಂದ್ ಮಾಡಿ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿರುವ ಕಾರಣ ಎಲ್ಲಿಯೂ ನೂಕುನುಗ್ಗಲು ಉಂಟಾಗದ ರೀತಿಯಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲು ಅನುಕೂಲವಾಯಿತು. ಭಟ್ಕಳ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ದೇವರ ದರ್ಶನ ಪಡೆದರು. ನಾಗಬನ ಸಮಿತಿಯಿಂದ ಶಾಸಕ ಸುನೀಲ್ ನಾಯ್ಕ ಮತ್ತು ಹಿಂದೂ ಪರ ಹೋರಾಟಗಾರ ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಾಗಬನ ಸಮಿತಿ ಅಧ್ಯಕ್ಷ ದಿಗಂಬರ ಶೇಟ್, ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮುಖಂಡರಾದ ನಾಗೇಶ ನಾಯ್ಕ, ರಾಜೇಶ ಮಹಾಲೆ, ಶ್ರೀಕಾಂತ ನಾಯ್ಕ, ವೆಂಕಟೇಶ ನಾಯ್ಕ, ಸುಬ್ರಾಯ ದೇವಾಡಿಗ, ವೆಂಕಟೇಶ ನಾಯ್ಕ, ದೀಪಕ ನಾಯ್ಕ ಇತರರು ಇದ್ದರು.