ಭಟ್ಕಳ- ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಂಕಾಳ ವೈದ್ಯ ಅವರು ಬೆಂಗಳೂರಿನಿಂದ ಬರುತ್ತಲೇ ಹೊನ್ನಾವರದಲ್ಲಿಯೇ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿ ಜಿಲ್ಲೆಗೆ ಬರಮಾಡಿಕೊಂಡಿದ್ದು ಸಾವಿರಾರು ಜನರು, ಬೈಕ್, ಕಾರ್ ರ‍್ಯಾಲಿಯ ಮೂಲಕ ಭಟ್ಕಳದ ತನಕ ಮೆರವಣಿಗೆ ನಡೆಸಿದರು.
ಮಂಕಾಳ ವೈದ್ಯ ಅವರು ತೆರೆದ ಜೀಪಿನಲ್ಲಿ ರಸ್ತೆಯುದ್ದಕ್ಕೂ ಕಾಯುತ್ತಾ ನಿಂತಿರುವ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಎಲ್ಲರನ್ನು ಕೈಬೀಸಿ ಅಭಿನಂದಿಸುತ್ತಾ ಸಾಗಿದ್ದು ಎಲ್ಲ ಕಡೆಗಳಲ್ಲಿಯೂ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಇವರನ್ನು ಸ್ವಾಗತಿಸುವುದಕ್ಕೆ ನಿಂತಿರುವುದು ವಿಶೇಷವಾಗಿತ್ತು.
ಸಂಜೆ 5 ಗಂಟೆಯ ಸುಮಾರಿಗೆ ಹೊನ್ನಾವರಕ್ಕೆ ತಲುಪುತ್ತಲೇ ಹೊನ್ನಾವರ ಗ್ರಾಮದ ಮುಗ್ವಾದ ಹುಲಿಯಪ್ಪನಕಟ್ಟೆ ಹತ್ತಿರ ಇವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚಿವರಿ ಪೊಲೀಸ್ ವರಿಷ್ಟಾಧಿಕಾರಿ ಸಿ. ಟಿ. ಜಯಕುಮಾರ್, ಹೊನ್ನಾವರ ಮತ್ತು ಭಟ್ಕಳದ ತಹಸೀಲ್ದಾರ್, ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು ಹಾರ ಹಾಕಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ತೆರೆದ ಜೀಪಿನಲ್ಲಿ ಬಂದ ಅವರು ಭಟ್ಕಳಕ್ಕೆ ಆಗಮಿಸುತ್ತಲೇ ಕಾರ್ಯಕರ್ತರ ಸಂಭ್ರಮ ಇಮ್ಮಡಿಗೊಂಡಿತ್ತು. ಇಲ್ಲಿನ ಶಂಶುದ್ಧೀನ್ ಸರ್ಕಲ್ ಹತ್ತಿರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಪಕ್ಷದ ಮುಖಂಡರು, ವಿವಿಧ ಸಮಾಜದ ಮುಖಂಡರುಗಳು ಸಚಿವರನ್ನು ಕಂಡು ದೂರದಿಂದಲೇ ಅಭಿನಂದಿಸಿದರು. ಸಾವಿರಾರು ಬೈಕ್‌ಗಳಲ್ಲಿ ಬಂದಿದ್ದ ಕಾರ್ಯಕರ್ತರ ಮಂಕಾಳ ವೈದ್ಯದ ಪರ ಘೋಷಣೆ ಮುಗಿಲು ಮುಟ್ಟಿತ್ತು.