ಆಳ್ವಾಸ್ ವಿರಾಸಾತ್ 2023 ಕಾರ್ಯಕ್ರಮದಲ್ಲಿ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ವಿವಿಧ ಮೀನಿನ ಖಾದ್ಯಗಳ ರಸದೌತಣ:
ಮೂಡುಬಿದಿರೆ : ಇಲ್ಲಿನ ಪ್ರತಿಷ್ಠಿತ ಆಳ್ಬಾಸ್ ಶಿಕ್ಷಣ ಪ್ರತಿಷ್ಠಾನದಿಂದ ಡಿಸೆಂಬರ್ ೧೪ ರಿಂದ ೧೭ರ ತನಕ ನಡೆಯುವ ಪ್ರಸಿದ್ಧ ೨೯ನೇ ವರ್ಷದ ಆಳ್ವಾಸ್ ವಿರಾಸಾತ್ ೨೦೨೩ರ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ, ಸ್ಕೊಡವೆಸ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ೫೧೧ ನೇ ಮಳಿಗೆಯಲ್ಲಿ ತನ್ನ ಕಂಪನಿಯ ಮೀನಿಯ ಮೌಲ್ಯವರ್ದಿತ ಉತ್ಪನ್ನಗಳು ಹಾಗೂ ವಿವಿಧ ತಾಜಾ ಮೀನಿನ ಖಾದ್ಯಗಳನ್ನು ತಯಾರಿಸಿ ಕರಾವಳಿಯ ಮೀನಿನ ಸವಿಯನ್ನು ಉಣಿಸುವಲ್ಲಿ ನಿರತವಾಗಿದೆ. ಅಲ್ಲದೇ ಕಂಪನಿಯ ನಿರ್ದೇಶಕರು ಮತ್ತು ಸದಸ್ಯರು ತಮ್ಮದೇ ಬ್ರಾಂಡನಲ್ಲಿ ತಯಾರಿಸಿದ ಮೀನಿನ ಉಪ್ಪಿನಕಾಯಿ, ಫ್ರಾನ್ಸ ಉಪ್ಪಿನಕಾಯಿ, ಫ್ರಾನ್ಸ ಚಟ್ನಿ, ಫಿಶ ಫ್ರೈ ಮಸಾಲಾ, ರೆಡಿ ಟೂ ಈಟ್ ಮಸಾಲಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದೆ. ಕಂಪನಿಯ ನಿರ್ದೇಶಕರು ಮತ್ತು ಷೇರುದಾರರು ವಿವಿಧ ಬಗೆಯ ತಾಜಾ ಮೀನು ಮತ್ತು ಸಾಗರೋತ್ಪನ್ನಗಳ ಫ್ರೈ, ಕಬಾಬ್, ಸಿಗಡಿ ಗಸಿ, ಬಂಡಾಸ್ ಸುಕ್ಕ, ಫಿಶ್ ಕಟ್ಲೆಟ್ಸ್, ಫಿಶ್ ಬಾಲ್ಸ್, ಕೋರಿ ರೊಟ್ಟಿಯ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸಿ ಆಹಾರ ಪ್ರಿಯರ ಗಮನ ಸೆಳೆಯುತ್ತಿದೆ. ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಉತ್ಪನ್ನಗಳಾದ ಮೀನಿನ ಉಪ್ಪಿನಕಾಯಿಗಳು, ಮೀನಿನ ಚಟ್ನಿ ಪುಡಿಗಳು, ಮೀನಿನ ಮಸಾಲೆಗಳನ್ನು ಪ್ರದರ್ಶನ ಹಾಗೂ ಮಾರಾಟವನ್ನೂ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ನಿರ್ದೇಶಕಿ ರೇಣುಕಾ ಸುವರ್ಣ, ಸದಸ್ಯರಾದ ವನಿತಾ, ಮುಖ್ಯ ಕಾರ್ಯ ನಿರ್ವಾಹಕ ವಿಷ್ಣು ಪ್ರಸಾದ್, ಉಪಸ್ಥಿತರಿದ್ದು ಮೀನಿನ ಖಾದ್ಯಗಳನ್ನು ಉಣಬಡಿಸುತ್ತಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದಲ್ಲಿ ನಡೆಯುವ ವಿಶೇಷ ಉತ್ಸವಗಳು, ಆಹಾರ ಮೇಳಗಳಲ್ಲಿ ಪಾಲ್ಗೊಂಡು ತನ್ನ ಕಂಪನಿಯ ನಿರ್ದೇಶಕರು ಮತ್ತು ಸದಸ್ಯರು ತಯಾರಿಸಿದ ಉತ್ತಮ ಗುಣಮಟ್ಟದ ಮೀನು ಮತ್ತು ಸಾಗರೋತ್ಪನ್ನಗಳ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುತ್ತ ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಎಲ್ಲ ನಿರ್ದೇಶಕರು ಮಹಿಳೆಯರೇ ಆಗಿದ್ದು ಕಂಪನಿಯ ೮೦% ಸದಸ್ಯರು ಮಹಿಳೆಯರೇ ಆಗಿರುವುದು ವಿಶೇಷ. ಕಳೆದ ಡಿಸೆಂಬರ್ ೨ ಮತ್ತು ೩ ನೇ ತಾರೀಖಿನಂದು ಉಡುಪಿಯಲ್ಲಿ ಮೀನು ಮತ್ತು ಸಾಗರೋತ್ಪನ್ನ ಖಾದ್ಯಗಳ ರಸದೌತಣ ನೀಡಿದ ಮತ್ಸ್ಯಮೇಳವನ್ನು ಉಡುಪಿಯ ಶಾಸಕರಾದ ಯಶಪಾಲ ಸುವರ್ಣ ಹಾಗೂ ನಾಡೋಜ ಜಿ.ಶಂಕರ್ ಅವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಆಯೋಜಿಸಿರುವುದನ್ನು ಇಲ್ಲಿ ಸ್ಮರಿಸಬಹುದು.