ಅಪರಿಚಿತ ವಾಹನ ಹರಿದು ಮರಳುಗಾರಿಕೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಸಾವು:
ಅಕ್ರಮ ಮರಳು ಗಾರಿಕೆಗೆ ಮತ್ತೆಷ್ಟು ಬಲಿ ಬೇಕು…?
ಹೊನ್ನಾವರ: ತಾಲೂಕಿನ ಕರಿಕುರ್ವ ಸೇತುವೆ ಬಳಿ ಅಪರಿಚಿತ ವಾಹನ ಹರಿದು ಮರಳುಗಾರಿಕೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮರಳು ದಿಬ್ಬದಲ್ಲಿ ಮರಳು ತುಂಬುವ ಕೆಲಸ ಮಾಡಿಕೊಂಡಿದ್ದ ದರ್ಶನ ಎನ್ನುವ ಯುವಕ ಅಪಘಾತವಾದ ಸ್ಥಿತಿಯಲ್ಲಿ ಕರಿಕುರ್ವ ಬ್ರಿಡ್ಜ್ ಹತ್ತಿರ ಕಂಡು ಬಂದಿದ್ದಾನೆ. ನಿತ್ಯವೂ ಮರಳು ತುಂಬುವ ಕೆಲಸಕ್ಕೆ ಹೋಗುತ್ತಿದ್ದ ಈತ ಈದಿನವೂ ಅಲ್ಲಿಯೇ ಕೆಲಸಕ್ಕೆ ಹೋಗಿದ್ದನು. ಉಳಿದ ಕಾರ್ಮಿಕರು ಒಂದೆಡೆ ಕುಳಿತಿದ್ದರೆ, ಇವನು ಮೊಬೈಲ್ ಹಿಡಿದುಕೊಂಡು ಬೇರೆ ಕಡೆ ಹೋಗಿದ್ದ ಎನ್ನಲಾಗಿದೆ. ನಂತರ ಅಲ್ಲೇ ಹತ್ತಿರದ ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಮರಳು ತುಂಬಲು ಬಂದಿರುವ ವಾಹನ ಶಂಕೆ :
ಅಪರಿಚಿತ ವಾಹನ ಎಂದು ಕಂಡು ಬಂದಿದ್ದರೂ ಕೂಡ, ಮರಳು ವಾಹನ ಹರಿದೇ ಯುವಕ ಮೃತ ಪಟ್ಟಿದ್ದಾನೆ ಎನ್ನುವ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ. ಕರಿಕುರ್ವ ಸೇತುವೆಯ ಅಕ್ಕಪಕ್ಕದ ವ್ಯಾಪ್ತಿಯಲ್ಲಿ ಮರಳುಗಾರಿಕೆ ಎಲ್ಲಿ ನಡೆಯುತ್ತಿತ್ತು? ಆ ಸಮಯದಲ್ಲಿ ಮರಳು ತುಂಬಲು ಯಾವ ವಾಹನ ಬಂದಿತ್ತು? ಇತರೆ ವಾಹನ ಅಲ್ಲಿ ಬಂದಿತ್ತೇ ಎನ್ನುವ ತನಿಖೆ ಆಗಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಾಹನ, ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಅಕ್ರಮ ಮರಳು ಗಾರಿಕೆಗೆ ಮತ್ತೆಷ್ಟು ಬಲಿ ಬೇಕು…?
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಇತ್ತೀಚಿಗೆ ಸಾಕಷ್ಟು ಜೀವ ಬಲಿ ತೆಗೆದುಕೊಳ್ಳುತ್ತಿದೆ. ಮರಳುಗಾರಿಕೆ ವಾಹನಗಳ ನಿಷ್ಕಾಳಜಿಯಿಂದ ಸಾವು ನೋವು ನಿರಂತರವಾಗಿದೆ. ಅಕ್ರಮ ಮರುಳು ದಂಧೆಯ ಮಾಫಿಯ ಗ್ಯಾಂಗ್‌ನಂತಾಗಿದ್ದು, ಅವರ ಬಿಗಿ ಹಿಡಿತಕ್ಕೆ ತಾಲೂಕೇ ತಲ್ಲಣಗೊಳ್ಳುವಷ್ಟರ ಮಟ್ಟಿಗೆ ವಿಸ್ತರಣೆಗೊಂಡಿದೆ. ಅಕ್ರಮ ಮರಳುಗಾರಿಕೆಯಿಂದ ಮತ್ತೆಷ್ಟು ಬಲಿ ಬೇಕು ಎನ್ನುವ ಪ್ರಶ್ನೆ ಹುಟ್ಟಿವಂತಾಗಿದೆ. ತಾಲೂಕಾ ಆಡಳಿತದ ನಿರ್ಲಕ್ಷವೇ ಈ ಎಲ್ಲ ಅವಘಡಕ್ಕೆ ಕಾರಣವಾಗುತ್ತಿದೆ ಎನ್ನುವ ಮಾತು ಜನ ಸಾಮಾನ್ಯರಲ್ಲಿ ಕೇಳಿ ಬರುತ್ತಿದೆ.