ಭಟ್ಕಳ :ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಪಂ ವ್ಯಾಪ್ತಿಯ ಸೋಡಿಗದ್ದೆ ಕ್ರಾಸ್ ರೈಲ್ವೆ ಹಳಿ ಸಮೀಪ ನಡೆದಿದೆ.ಇಂದು ಮಂಗಳವಾರ ಬೆಳಿಗ್ಗೆ ಯುವಕನ ಮೃತ ದೇಹ ಪತ್ತೆಯಾಗಿದೆ.
ಮೃತ ಯುವಕನ್ನು ಭಟ್ಕಳ ತಾಲೂಕಿನ ಆಶಿಕಾನ್ ನಿವಾಸಿ ಗಿರೀಶ ಪಾಂಡು ಜೋಗಿ ಎಂದು ಗುರುತಿಸಲಾಗಿದೆ. ರೈಲು ಡಿಕ್ಕಿಯಾದ ರಭಸಕ್ಕೆ ಯುವಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಸಂಜೆ ಗಿರೀಶ್ ಮನೆಯಿಂದ ಹೊರ ಹೋಗಿದ್ದ. ಸ್ವಲ್ಪ ಮದ್ಯಪಾನ ಮಾಡುತ್ತಿದ್ದ ಈತ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಯಾವುದೋ ರೈಲು ಬಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.