ಸಿಬ್ಬಂದಿಯಿಂದಲೇ ಲಂಚ ವಸೂಲಿ ಮಾಡುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ.
ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಕಡತಗಳಿಗೆ ಸಿಬ್ಬಂದಿಯಿಂದಲೇ ಹಣ ಪಡೆಯುತ್ತಿದ್ದ ಇಲ್ಲಿನ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಜಿಲ್ಲಾ ಭೂ ದಾಖಲೆಗಳ ಮತ್ತು ಸರ್ವೆ ಉಪನಿರ್ದೇಶಕ ಪ್ರವೀಣ ಜಾಧವ್ ಹಾಗೂ ಮಧ್ಯವರ್ತಿ ಶರಣಗೌಡ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಭೂ ದಾಖಲಾತಿಗಳ ಕಡತಗಳಿಗೆ ಸಹಿ ಹಾಕಲು ಜತೆಗೆ ನಗರದ ಬ್ರಹ್ಮಪುರ ಸರ್ವೆ ನಂಬರ್ ವೊಂದರ 25 ಎಕರೆ ಗುಂಟೆ ಜಮೀನಿನ ಪೋಡಿ ಮಾಡಲು 3. 50 ಲಕ್ಷ ರೂ ಬೇಡಿಕೆ ಇಟ್ಟು ಅದರಲ್ಲಿ 1.50 ಲಕ್ಷ ರೂ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭೂ ದಾಖಲೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದಲೇ ಪ್ರತಿಯೊಂದು ಕಾರ್ಯಕ್ಕೂ ಯಾರ ಭಯವಿಲ್ಲದೇ ಹಣದ ಬೇಡಿಕೆ ಇಡುತ್ತಿರುವುದು ವ್ಯಾಪಕವಾಗಿ ಕೇಳಿ ಬಂದಿತ್ತು.
ಇದರಿಂದ ಇಲಾಖೆಯ ಭೂಮಾಪಕ ರೇವಣಸಿದ್ದ ಮೂಲಗೆ ಅವರೇ ರೋಸಿ ಹೋಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇನ್ನೂ ಅಧಿಕಾರಿಗಳು ಸಿಬ್ಬಂದಿಗಳಿಗೆ ನೀವು ಏನಾದರೂ ತಪ್ಪು ಮಾಡಿದರೆ ಅಮಾನತು ಮಾಡುತ್ತೇನೆ ಅಂತ ಹೇಳಿ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ.
ಪ್ರತಿಯೊಂದು ಕಡತಕ್ಕೆ ಹಣ ಕೊಡಬೇಕೆಂದು ಹೇಳುತ್ತಿದ್ದ ಡಿಡಿಎಲ್ ಆರ್ ಜಾಧವ್ ಕೊನೆಗೂ ಪ್ರಕರಣವೊಂದರಲ್ಲಿ ಮೂರುವರೆ ಲಕ್ಷ ರೂ. ಬೇಡಿಕೆಯಿಟ್ಟು 1.50 ಲಕ್ಷ ರೂ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಜಾನ ಆಂಟೋನಿ ಮಾರ್ಗದರ್ಶನ ದಲ್ಲಿ ಡಿಎಸ್ಪಿ ಗೀತಾ ಬೇನಾಳ, ಮಂಜುನಾಥ, ಇನ್ಸಪೆಕ್ಟರ್ ರಾಜಶೇಖರ ಹಳಗೋಧಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿ ಮಧ್ಯರಾತ್ರಿವರೆಗೂ ಪಂಚನಾಮೆ ನಡೆಸಿದ್ದು, ತನಿಖಾ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.