ಸಿದ್ದಾಪುರ: ಕುಮಟಾದ ಪತ್ರಕರ್ತ ಚರಣರಾಜ್ ನಾಯ್ಕರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಾ ಮಾಧ್ಯಮ ಪ್ರತಿನಿಧಿಗಳ ಸಂಘದ ಸದಸ್ಯರು ಹಾಗೂ ಪ್ರಮುಖರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಾವುಗಳು ಸಂವಿಧಾನಬದ್ಧವಾಗಿ ಹಾಗೂ ಪತ್ರಿಕಾ ಧರ್ಮದಂತೆ ಕಳೆದ ಹಲವು ವರ್ಷಗಳಿಂದ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಜಾತಿ, ಧರ್ಮ ಬೇಧವಿಲ್ಲದೇ ಪಕ್ಷಾತೀತವಾಗಿ ಮತ್ತು ವಸ್ತುನಿಷ್ಠ ವರದಿಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಗೌರವವನ್ನು ಸಂಪಾದಿಸಿದ್ದೇವೆ. ಸಾರ್ವಜನಿಕರ ಬದುಕಿನಲ್ಲಿರುವ ಕೆಲ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಆರೋಪಗಳು ಸಾರ್ವಜನಿಕವಾಗಿ ವ್ಯಕ್ತವಾದಾಗ ಅದನ್ನು ಅವರು ತಮ್ಮ ವಿರುದ್ಧದ ಅಪಪ್ರಚಾರ ಎಂದು ಭಾವಿಸುವುದು ಸಾಮಾನ್ಯವಾಗಿದೆ. ಆದರೆ ಪತ್ರಕರ್ತರು ಯಾವುತ್ತೂ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರಿಂದ ತಮ್ಮ ವೃತ್ತಿನಿಷ್ಠೆಯನ್ನು ಮತ್ತು ನಿಲುವನ್ನು ಸಾರ್ವಜನಿಕರ ಪರವಾಗಿ ವ್ಯಕ್ತಪಡಿಸುವುದು ಪತ್ರಿಕಾ ಧರ್ಮವಾಗಿದೆ. ಆದರೆ ಇದನ್ನು ಸಹಿಸದ ಕೆಲ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರ ಮೂಲಕ ಪತ್ರಕರ್ತರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಕನ್ನೇಶ ಕೋಲಶಿರ್ಸಿ ಮಾತನಾಡಿ, ಕುಮಟಾ ಶಾಸಕ ದಿನಕರ ಶೆಟ್ಟಿಯವರ ಅಭಿಮಾನಿಯಾದ ಜಯಾ ಶೇಟ್ ಮತ್ತು ಕುಮಟಾದ ಬಿಜೆಪಿಯ ಕೆಲ ಕಾರ್ಯಕರ್ತರು ಸೇರಿ ಕುಮಟಾ ತಾಲೂಕಿನ ಪತ್ರಕರ್ತರಾದ ಚರಣರಾಜ್ ನಾಯ್ಕರ ಮೇಲೆ ಸುಳ್ಳು ದೂರು ದಾಖಲಿಸಿರುವುದು ನಿಜಕ್ಕೂ ಖಂಡನೀಯ. ಪತ್ರಕರ್ತರ ಸಂವಿಧಾನಿಕ ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡುವ ಮತ್ತು ಪತ್ರಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕಾರ್ಯವಾಗಿದೆ. ಹಾಗಾಗಿ ಚರಣರಾಜ್ ನಾಯ್ಕರ ವಿರುದ್ಧ ದಾಖಲಾದ ದೂರನ್ನು ರದ್ದುಗೊಳಿಸುವ ಮೂಲಕ ಪತ್ರಕರ್ತರು ನಿರ್ಭಯರಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಅಲ್ಲದೇ ಪತ್ರಕರ್ತರ ವಿರುದ್ಧ ಸುಳ್ಳು ದೂರುಗಳು ಬಂದಾಗ ಪೊಲೀಸ್ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಅರಿತುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆ ಹೊರತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ನೇರವಾಗಿ ಪ್ರಕರಣ ದಾಖಲಿಸಿ ತೊಂದರೆ ನೀಡುವ ಕಾರ್ಯ ಪೊಲೀಸ್ ಇಲಾಖೆ ಮಾಡಬಾರದೆಂದು ಆಗ್ರಹಿಸಿದರು.
ರೈತ ಮುಖಂಡ ವೀರಭದ್ರ ನಾಯ್ಕ ಮಾತನಾಡಿ ಪತ್ರಕರ್ತ ರ ಮೇಲೆ ದಾಖಲಾಗಿರುವ ಪ್ರಕರಣ ಹಿಂದಕ್ಕೆ ಪಡೆಯುವಂತೆ ಅಗ್ರಹಿಸುತ್ತೇವೆ.ಪತ್ರಕರ್ತರ ಪ್ರಾಮಾಣಿಕ ಕಾರ್ಯವನ್ನು ನಿರ್ವಹಿಸಲು ನಮ್ಮ ನೈತಿಕವಾದ ಬೆಂಬಲ ನೀಡುತ್ತಿದ್ದೇವೆ ಎಂದರು.ಸಾಮಾಜಿಕ ಧುರೀಣ ನಾಸಿರ್ ಖಾನ್ ಮನವಿ ನೀಡುವ ವೇಳೆ ಹಾಜರಿದ್ದು ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ ನಾಯ್ಕ ಮೋಳ್ಕೋಡ, ಕಾರ್ಯದರ್ಶಿ ಯಶವಂತ ನಾಯ್ಕ ತ್ಯಾರ್ಸಿ, ಖಜಾಂಚಿ ಪ್ರಶಾಂತ ಶೇಟ್, ಸದಸ್ಯ ದಿವಾಕರ ಸಂಪಖಂಡ ಉಪಸ್ಥಿತರಿದ್ದರು.