ಭಟ್ಕಳ ತಂಜಿಮ್ ಇನ್ನು ಯಾವ ಪಕ್ಷಕ್ಕೂ ಬೆಂಬಲ ಘೋಷಣೆ ಮಾಡಿಲ್ಲ – ತಂಜೀಂ ಸಂಸ್ಥೆಯ ರಾಜಕೀಯ ವಿಭಾಗದ ಸಂಚಾಲಕ ಇಮ್ರಾನ ಲಂಕಾ
ಭಟ್ಕಳ-ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ- ಹೊನ್ನಾವರ ಕ್ಷೇತ್ರದಲ್ಲಿ ಸದ್ಯಕ್ಕೆ ತಂಜೀಂ ಬೆಂಬಲ ಕೋರಿ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಮೂವರಲ್ಲಿ ಕೋಮುವಾದಿ ಪಕ್ಷಕ್ಕೆ ನಮ್ಮ ತಂಜೀಂ ಬೆಂಬಲವಿಲ್ಲ ಎಂದು ತಂಜೀಂ ಸಂಸ್ಥೆಯ ರಾಜಕೀಯ ವಿಭಾಗದ ಸಂಚಾಲಕ ಇಮ್ರಾನ ಲಂಕಾ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸದ್ಯಕ್ಕೆ ತಂಜೀಂನಿಂದ ಯಾರಿಗೆ ಬೆಂಬಲ ಎಂಬ ವಿಚಾರದಲ್ಲಿ ಇನ್ನು ತೀರ್ಮಾನ ತೆಗೆದುಕೊಂಡಿಲ್ಲ. ಚುನಾವಣಾ ಕಣದಲ್ಲಿ ಮುನ್ನಡೆ ಇರುವ ಒಬ್ಬ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದ್ದು, ನಮಗೆ ಈ ನಿರ್ಧಾರದಲ್ಲಿ ಗೊಂದಲವಿದೆ. ಈ ಬಗ್ಗೆ ಚರ್ಚಿಸಿ ಸಮಾಲೋಚನೆ ನಡೆಸಿ ಚುನಾವಣೆಯೊಳಗೆ ಸಮುದಾಯಕ್ಕೆ ತಂಜೀಂ ಬೆಂಬಲ ಯಾರಿಗೆ ಎನ್ನುವುದನ್ನು ಸ್ಪಷ್ಟ ಪಡಿಸಲಿದ್ದೇವೆ ಎಂದರು. ಜೆಡಿಎಸ್ ಅಬ್ಯರ್ಥಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಒಳ್ಳೆಯ ಚಾರಿತ್ರ್ಯ ಹಿನ್ನೆಲೆವುಳ್ಳ ವ್ಯಕ್ತಿ ಎಂದರು. ಭಟ್ಕಳದಲ್ಲಿ ಅಭಿವೃದ್ಧಿ ವಿಚಾರ, ಅಪಪ್ರಚಾರ ಮಾಡದೇ ಇರುವ, ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಕೋಮುವಾದ ಮಾಡದೇ ಇರುವ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡಲಿದ್ದೇವೆ ಎಂದರು.
ಸಂವಿಧಾನಬದ್ದ ಇರುವ ಮತದಾನದ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮತಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು. ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡುವ ವೇಳೆ ನಾಗರಿಕರು 5 ವರ್ಷದ ಅವಧಿಯಲ್ಲಿ ನಡೆದ ವಿಚಾರ ಹಾಗೂ ಘಟನೆಗಳನ್ನು ಗಮನದಲ್ಲಿರಿಸಿಕೊಂಡು ಮತದಾನ ಮಾಡಬೇಕು. ಇದರಲ್ಲಿ ಬೆಲೆ ಏರಿಕೆ, ಮಕ್ಕಳ ಭವಿಷ್ಯ, ಉದ್ಯೋಗ ಸ್ರಷ್ಟಿ, ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ಸೌಹಾರ್ದತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಂಜೀಂ ಸಂಸ್ಥೆಯ ರಾಜಕೀಯ ವಿಭಾಗದ ಸಹ ಸಂಚಾಲಕ ಅಜಿಜುರೆಹೆಮಾನ್ ಹಾಜರಿದ್ದರು.