ಜನತಾ ವಿದ್ಯಾಲಯ ಮುರ್ಡೇಶ್ವರ ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಂಸ್ಥಾಪಕರ ದಿನಾಚರಣೆ – ದಿನಕರ ದೇಸಾಯಿ ಸಂಸ್ಮರಣೆ
ಮುರ್ಡೇಶ್ವರ : ಜನತಾ ವಿದ್ಯಾಲಯ ಮುರ್ಡೇಶ್ವರ ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಚುಟುಕು ಬ್ರಹ್ಮ ದಿನಕರ ದೇಸಾಯಿ ಸಂಸ್ಮರಣೆ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಉಪನ್ಯಾಸಕ ಸಂತೋಷ ಆಚಾರ್ಯ ದೀಪ ಬೆಳಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಿನಕರ ದೇಸಾಯಿಯವರು ಸಾಹಿತ್ಯ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳಿಂದಾಗಿಯೇ ಇಂದಿಗೂ ಸ್ಮರಿಸಿಕೊಳ್ಳಲಾಗುತ್ತಿದೆ. ಅಂಥವರು ಸ್ಥಾಪಿಸದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರ ಜೀವನದ ಆದರ್ಶಗಳಿಂದ ಪ್ರೇರಿತರಾಗಿ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ದಿನಕರ ದೇಸಾಯಿಯವರದ್ದು ಬಹುಮುಖದ ವ್ಯಕ್ತಿತ್ವ. ಅವರು ಬರೆಹಗಾರ, ಪತ್ರಕರ್ತ, ಶಿಕ್ಷಣ ಪ್ರೇಮಿ, ಪತ್ರಕರ್ತ, ರಾಜಕಾರಣಿ, ಸಮಾಜವಾದಿ ಚಿಂತಕ, ವಿಚಾರವಾದಿ ಮಾತ್ರವಲ್ಲ ಓರ್ವ ಮಾನವತಾ ವಾದಿಯಾಗಿ ಹತ್ತು ಹಲವು ಕ್ಷೇತ್ರಕ್ಕೆ ತಮ್ಮ ವೈಚಾರಿಕತೆಯ ಬೆಳಕನ್ನು ಪಸರಿಸಿ ನಿಜವಾದ ಅರ್ಥದಲ್ಲಿ ದಿನಕರ ಎಂದರೆ ಸೂರ್ಯನೇ ಆಗಿದ್ದಾರೆ ಮಾತ್ರವಲ್ಲ ತಮ್ಮ ಬದುಕಿನುದ್ದಕ್ಕೂ ನುಡಿದಂತೆ ನಡೆದ ಮಹಾನ್ ಚೇತನ. ಅವರನ್ನು ಕೇವಲ ಚೌಪದಿಯ ಬ್ರಹ್ಮ ಎಂದು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತ ದೃಷ್ಟಿಯಿಂದ ಕಂಡರೆ ಅವರೊಳಗಿನ ಬಹುಮುಖ ವ್ಯಕ್ತಿತ್ವ ಮತ್ತು ಅವರ ಚಿಂತನೆಯ ಸಮಗ್ರ ಸ್ವರೂಪದ ಪರಿಚಯ ನಮಗೆ ಆಗಲಾರದು. ತಮ್ಮ ಚೌಪದಿಯ ಮೂಲಕ ಸಮಾಜದ ಅನಿಷ್ಟಗಳು, ಮತ್ತು ಹುಳುಕುಗಳಿಗೆ ಕುಟುಕಿದ್ದಾರೆ. ಅವರ ಚೌಪದಿಗಳು ಓದಲು ತುಂಬ ಸರಳವಾಗಿದ್ದರೂ ನೀಡುವ ಅರ್ಥ ಮಾತ್ರ ತುಂಬ ಗಹನವಾದುದು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯ ಮೂಲಕ ಈ ನಾಡನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೆಳಗುವ ಅನೇಕ ದಿನಕರರನ್ನು ನೀಡಿದ್ದಾರೆ ಎಂದರು
ಸಾಹಿತಿ ಮಾನಾಸುತ ಶಂಭು ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚುಟುಕುಗಳ ಮೂಲಕ ಚುಟುಕು ಬ್ರಹ್ಮ ದಿನಕರ ದೇಸಾಯಿಯವರಿಗೆ ನುಡಿನಮನ ಸಲ್ಲಿಸಿದರು.
ಶಾಲಭಿವೃದ್ಧಿ ಸಮಿತಿ ಅಧ್ಯಕ್ಷರೂ, ಕಸಾ ಪ ಆಜೀವ ಸದಸ್ಯರಾದ ಎಸ್.ಎಸ್.ಕಾಮತ್ ಅಧ್ಯಕ್ಷತೆ ವಹಿಸಿದ್ದರು
ವಿದ್ಯಾರ್ಥಿಗಳಿಗೆ ದಿನಕರರ ಬದುಕು -ಬರೆಹ ದ ಕುರಿತು ಭಾಷಣ ಸ್ಪರ್ಧೆ, ದಿನಕರರು ರಚಿಸಿದ ಗೀತೆಗಳ ಗಾಯನ ಮತ್ತು ಚುಟುಕು ವಾಚನ ಸ್ಪರ್ಧೆ ನಡೆಸಿ ಸಾಹಿತ್ಯ ಪರಿಷತ್ತಿನ ವತಿಯಿಂದ ಬಹುಮಾನ ವಿತರಿಸಲಾಯಿತು. ಮುಖ್ಯಾಧ್ಯಾಪಕಿ ಉಷಾ ಭಟ್ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಆಶಾ ಕಲ್ಮನೆ ವಂದಿಸಿದರು. ಶಿಕ್ಷಕರಾದ ಮಹೇಶ ಹಣಬರಟ್ಟಿ ದಿನಕರರ ಕುರಿತು ಮಾತನಾಡಿದರು. ಶಿಕ್ಷಕ ಮಹೇಶ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.