ವಿದ್ಯಾರ್ಥಿಗಳು ತಮ್ಮೊಳಗಿನ ಆಸಕ್ತಿ, ಸಾಮರ್ಥ್ಯವನ್ನು ಗುರುತಿಸಿಕೊಂಡು ಯಶಸ್ಸು ಸಾಧಿಸಬೇಕು- ಗಂಗಾಧರ ನಾಯ್ಕ.
ಹೊನ್ನಾವರ-ವಿದ್ಯಾರ್ಥಿಗಳು ತಮ್ಮೊಳಗಿನ ಆಸಕ್ತಿ, ಸಾಮರ್ಥ್ಯವನ್ನು ಗುರುತಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ನುಡಿದರು. ಅವರು ಇಲ್ಲಿನ ಮಂಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಸಾಂಕ್ರಕೃತಿಕ, ಎನ್.ಎಸ್.ಎಸ್. ಮುಂತಾದ ವಿವಿಧ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾಲೇಜು ಜೀವನದಲ್ಲಿ ಆಯೋಜಿಸುವ ವಿವಿಧ ಚಟುವಟಿಕೆಗಳು ನಮ್ಮ ವಿವಿಧ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳ ಅನಾವರಣಕ್ಕೆ ಸಹಕಾರಿ. ಪಠ್ಯದ ಜೊತೆಗೆ ನಮ್ಮ ಆಸಕ್ತಿಯ ಕ್ಷೇತ್ರ ಗುರುತಿಸಿಕೊಂಡು ಅದಕ್ಕೆ ಪೂರಕವಾದ ತರಬೇತಿ ಪಡೆದುಕೊಂಡು ನಮ್ಮಲ್ಲಿನ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಸಮಯದ ಮಹತ್ವವನ್ನು ಅರಿತು ಗುರಿಯನ್ನು ನಿರ್ಧರಿಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ ಎಂದು ನುಡಿದರಲ್ಲದೇ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ವೇದಿಕೆಯೊದಗಿಸುವ ಕಾಲೇಜಿನ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೇ ಕನ್ನಡ ಗೀತೆಗಳನ್ನೂ ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಮಟಾ ಡಾ.ಎ.ವಿ.ಬಾಳಿಗಾ ಕಾಲೇಜಿನ ಪ್ರಾಂಶುಪಾಲ ಡಾ.ಸೋಮಶೇಖರ ಗಾಂವಕರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ಅಭಿನಂದಿಸಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಯ ಪ್ರಜ್ಞೆ, ಶಿಸ್ತಿನ ಮಹತ್ವ ತಿಳಿಸಿದರಲ್ಲದೇ ಬದಲಾದ ರಾಷ್ಟ್ರೀಯ ಪಠ್ಯಕ್ರಮ ವಿದ್ಯಾರ್ಥಿಗಳ ಪ್ರಗತಿಗೆ ಹೇಗೆ ಅವಕಾಶ ಒದಗಿಸಲಿದೆ ಎಂಬುದನ್ನೂ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಮಾದೇಶ ಎ. ಮಾತನಾಡಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಸಾಧಕರಾಗಬಹುದು. ಕಾಲೇಜಿನಲ್ಲಿ ಪ್ರಾಂಶುಪಾಲರಾದಿಯಾಗಿ ಎಲ್ಲ ಉಪನ್ಯಾಸಕರು ನಿಮ್ಮ ಸಾಧನೆಗೆ ಬೆಂಬಲವಾಗಿ ನಿಲ್ಲಲು ಸದಾ ಸಿದ್ದ ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಉಪನ್ಯಾಸಕ ರಾಘವೇಂದ್ರ ಶೆಟ್ಟಿ, ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕ ಡಾ.ಅಬ್ದುಲ್ ಮಜೀದ್, ವಿದ್ಯಾರ್ಥಿ ಕಾರ್ಯದರ್ಶಿ ನಾಗರಾಜ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ನಾಗರಾಜ ನಾಯ್ಕ, ಸಾಂಸ್ಕೃತಿಕ ವೇದಿಕೆಯ ಪ್ರತಿನಿದಿ ಸಿಂಚನಾ ಶೆಟ್ಟಿ,ವಾರ್ಷಿಕ ಸಂಚಿಕೆ ಮತ್ತು ಭಿತ್ತಿಚಿತ್ರ ಪ್ರತಿನಿಧಿ ಜಯಂತಿ ನಾಯ್ಕ, ಕ್ರೀಡಾ ವೇದಿಕೆಯ ರಾಜೇಶ ನಾಯ್ಕ, ಎನ್.ಎಸ್.ಎಸ್.ಪ್ರತಿನಿದಿ ಗೌರೀಶ ದೇವಡಿಗ, ರೆಡಕ್ರಾಸ್ ಪ್ರತಿನಿಧಿ ಹರ್ಷ ಆಚಾರಿ, ವಾಚನಾಲಯ ಪ್ರತಿನಿದಿ ಪವನ ನಾಯ್ಕ, ರೇಂಜರ್ಸ ಪ್ರತಿನಿದಿ ಸುಬ್ರಮಣ್ಯ ನಾಯ್ಕ, ರೋವರ್ಸ ಪ್ರತಿನಿದಿ ಸಹನಾ ದೇವಾಡಿಗ, ಮಹಿಳಾ ವೇದಿಕೆಯ ಪ್ರತಿನಿದಿ ಪ್ರತಿಕ್ಷಾ ಗೌಡ, ಚುನಾವಣಾ ಸಾಕ್ಷರತಾ ಕ್ಲಬ್ ನ ಪ್ರತಿನಿದಿ ನಿತಿನ್ ನಾಯ್ಕ, ಉದ್ಯೋಗ ಭರವಸಾ ಕೋಶದ ಪ್ರತಿನಿದಿ ಮೇಘ ಶೆಟ್ಟಿ ಎನ್.ಎಸ್.ಎಸ್.ನ ಮಹಿಳಾ ಪ್ರತಿನಿದಿ ನಮಿತಾಶ್ರೀ ಪಟಗಾರ, ಕ್ರೀಡಾ ವೇದಿಕೆಯ ಮಹಿಳಾ ಪ್ರತಿನಿದಿ ನಮೃತಾ ನಾಯ್ಕ ಮುಂತಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪುಷ್ಪವನ್ನು ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಪ್ರಥಮ ವರ್ಷದಲ್ಲಿ ದಾಖಲಾತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಪರವಾಗಿ ಪೆನ್ನುಗಳನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಿ ನಿರ್ವಹಿಸಿದ್ದು ವಿಶೇಷವಾಗಿತ್ತು.
ಸ್ವಾತಿ ಸಂಗಡಿಗರು ಪ್ರಾರ್ಥಿಸಿದರೆ ವಿದ್ಯಾರ್ಥಿನಿ ನಿರ್ಮಲಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಪದ್ಮನಾಭ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದ್ಯಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.