ಹಳದಿಪುರ ರೈತ ಉತ್ಪಾದಕ ಕಂಪನಿಯಿಂದ ಯಶಸ್ವಿಯಾಗಿ ನಡೆದ ರೈತ ಉತ್ಪಾದಕ ಕಂಪನಿ ಮತ್ತು ಪಿಎಂಎಫ್ಎಂಇ ಯೋಜನೆಯ ಕುರಿತು ಮಾಹಿತಿ ಕಾರ್ಯಕ್ರಮ
ಹೊನ್ನಾವರ : ಕರ್ನಾಟಕ ಸರ್ಕಾರ, ಜಲಾನಯನ ಇಲಾಖೆ,ಕೃಷಿ ಇಲಾಖೆ ಹಾಗೂ ಸ್ಕೊಡವೇಸ್ ಸಂಸ್ಥೆಯಿಂದ ರಚಿತವಾದ ಹಳದಿಪುರ ರೈತ ಉತ್ಪಾದಕ ಕಂಪನಿಯಿಂದ ರೈತ ಉತ್ಪಾದಕ ಕಂಪನಿ ಯೋಜನೆಯ ಕುರಿತು ಮಾಹಿತಿ ಕಾರ್ಯಕ್ರಮವು ಇಲ್ಲಿನ ಹಳದಿಪುರದ ಮಾದಿಕೊಟ್ಟಿಗೆಯಲ್ಲಿ ನಡೆಯಿತು. ಸ್ಕೊಡವೆಸ್ ಸಂಸ್ಥೆಯ ಉತ್ತರಕನ್ನಡ ಮತ್ತು ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಮಾತನಾಡಿ ಸರ್ಕಾರ ರೈತ ಉತ್ಪಾದಕ ಕಂಪನಿಯನ್ನು ಆರಂಭಿಸಿದ ಉದ್ದೇಶ, ರೈತರಿಗೆ ಸಿಗುವ ಸೌಲಭ್ಯಗಳು, ಕೃಷಿಕರ ಆರ್ಥಿಕ ಅಭಿವೃದ್ಧಿಗೆ ಆಗುವ ಅನುಕೂಲಗಳ ಕುರಿತು ರೈತ ಮಹಿಳೆಯರಿಗೆ ಸವಿವರವಾದ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಕುರಿತೂ ಮಾಹಿತಿ ನೀಡಿದರಲ್ಲದೇ ಹೆಚ್ಚನ ಮಾಹಿತಿಗೆ ಹಳದಿಪುರ ರೈತ ಉತ್ಪಾದಕರ ಕಂಪನಿಯನ್ನು ಸಂಪರ್ಕಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಹಳದಿಪುರ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಿ ಆಶಾ ಭಟ್, ಚಂದ್ರಕಲಾ ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.