ಭಟ್ಕಳದ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೋಲಿಸ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ನೂತನ ಎಸ್.ಪಿ ಎಂ. ನಾರಾಯಣ
ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಗುರುವಾರ ಬೆಳ್ಳಿಗೆ ಭಟ್ಕಳದ ನಗರ ಪೊಲೀಸ ಠಾಣೆಗೆ ಭೇಟಿ ನೀಡಿದರು. ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಠಾಣೆಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರಿಗೆ ಭಟ್ಕಳ ನಗರ ಠಾಣೆ ಪೊಲೀಸರು ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವರಿಷ್ಠಾಧಿಕಾರಿಗಳು, ಠಾಣೆಯ ಆಗುಹೋಗುಗಳ ಬಗ್ಗೆ ವಿಚಾರಿಸಿದರು. ಸಿಬ್ಬಂದಿ ಸಂಖ್ಯೆ, ಪ್ರಕರಣಗಳ ಸಂಖ್ಯೆ, ಭಟ್ಕಳದಂತ ಸೂಕ್ಷ್ಮ ಸ್ಥಳದಲ್ಲಿ ಪೊಲೀಸ್ ಕಾರ್ಯಾಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ವಿವರಿಸಿದರು.
ಜಿಲ್ಲೆಯಲ್ಲಿ ಡ್ರಗ್ಸ್, ಮಟ್ಕಾ, ಅಕ್ರಮ ರೇತಿ, ಕ್ಲಬ್ ಹಾವಳಿ ಹೆಚ್ಚಿದೆ ಅನ್ನೋದು ಗೊತ್ತಾಗಿದೆ. ಒಂದು ವೇಳೆ ಇಂತಹ ಪ್ರಕರಣದಲ್ಲಿ ಪೊಲೀಸರು ಭಾಗಿಯಾದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬರುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಠಾಣೆಯ ಸಿಬ್ಬಂದಿಗೆ ವಿಸ್ತರಿಸಿ ಹೇಳಿದರು. ಈ ಹಿಂದೆ ಹೊನ್ನಾವರ, ಕಾರವಾರ ಮತ್ತು ರಾಮನಗರದಲ್ಲಾದ ಘಟನೆಗಳನ್ನು ದೃಷಾಂತರಿಸಿ ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು, ಈ ರೀತಿಯ ಘಟನೆಗಳು ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹೊಸ ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಹೊಸದಾಗಿ ಸಾಮಾಜಿಕ ಸೇವೆ ಎನ್ನುವ ಕಾನೂನು ಜಾರಿಗೆ ಬಂದಿದೆ. ಪದೇ ಪದೇ ಓರ್ವ ವ್ಯಕ್ತಿ ಸಣ್ಣ ಪುಟ್ಟ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದರೆ ಸ್ವಚ್ಛತೆ ಕೆಲಸಗಳಿಗೆ ಆತನನ್ನು ತೊಡಗಸಿಕೊಳ್ಳಲಾಗುವದು ಎಂದರು.
ನಾಳೆಯಿಂದ ಪೊಲೀಸ್ ಡೇ:
ಹದಿಹರೆಯದ ಯುವಕರು ಡ್ರಗ್ಸ್ ಗಾಂಜಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ಉದ್ದೇಶಕ್ಕಾಗಿ ಹಾಗೂ ಪೋಕ್ಸೊ ಪ್ರಕರಣ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಲು ನಾಳೆಯಿಂದ ಪ್ರತಿ ದಿನ ಶಾಲಾ_ಕಾಲೇಜುಗಳಲ್ಲಿ “ಪೊಲೀಸ್ ಡೇ” ಎನ್ನುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ ಎಂ.ಕೆ., ನಗರ ಠಾಣೆ ಸಿ.ಪಿ.ಐ. ಗೋಪಿಕೃಷ್ಣ, ಗ್ರಾಮೀಣ ಸಿ.ಪಿ.ಐ. ಚಂದನ ಗೋಪಾಲ ಮತ್ತಿತರರು ಉಪಸ್ಥಿತರಿದ್ದರು