ಭಟ್ಕಳ: ಮರಳು ಸಮಸ್ಯೆ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರು ಬುಧವಾರ ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನೂಕುನುಕ್ಕಲು-ತಳ್ಳಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದರು. `ತಮ್ಮ ಅಳಲು ಆಲಿಸಲು ಜಿಲ್ಲಾಧಿಕಾರಿ ಹಾಗೂ ಸಚಿವರು ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಹಳೆ ಬಸ್ ನಿಲ್ದಾಣದ ಆಟೋ ಚಾಲಕರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮೈದಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಸಂಶುದ್ದೀನ್ ಸರ್ಕಲ್ ಬಳಿ ಪ್ರತಿಭಟನೆ ತೆರಳಿತು. ಈ ವೇಳೆ ಕೆಲವರು ಸಚಿವರ ವಿರುದ್ದ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ವಾಗ್ವಾದ ನಡೆಯಿತು. ತಾಲೂಕಾ ಆಡಳಿತ ಸೌಧದವರೆಗೆ ಪ್ರತಿಭಟನೆ ತೆರಳುವತನಕ ಹೀಗೆ ೩-೪ ಕಡೆ ಪೊಲೀಸರ ಜೊತೆ ಪ್ರತಿಭಟನಾಕಾರರು ಮಾತಿಗೆ ಮಾತು ಬೆಳೆಸಿದರು. ಮನವಿ ಸ್ವೀಕರಿಸಲು ಸಹಾಯಕ ಆಯುಕ್ತರು ಸ್ಥಳಕ್ಕೆ ಬಂದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಜಿಲ್ಲಾಧಿಕಾರಿ ಆಗಮಿಸಿ ಮನವಿ ಆಲಿಸಬೇಕು ಎಂದು ಆಗ್ರಹಿಸಿದರು.
`ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಅಗತ್ಯವಾಗಿದೆ. ಮರಳು ಸಿಗದ ಕಾರಣ ಯಾವ ಕಟ್ಟಡವೂ ನಿರ್ಮಾಣವಾಗುತ್ತಿಲ್ಲ. ಮರಳು ತೆಗೆಯುವ ಕಾರ್ಮಿಕರ ಜೊತೆ ಕಟ್ಟಡ ಕಾರ್ಮಿಕರು ಸಹ ಉದ್ಯೋಗವಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು. `ಲಾರಿ ಮಾಲಕ-ಚಾಲಕ, ಗುತ್ತಿಗೆದಾರ ಸೇರಿ ಅನೇಕರು ಈ ಸಮಸ್ಯೆಯಿಂದ ನೊಂದಿದ್ದಾರೆ’ ಎಂದು ವಿವರಿಸಿದರು.
`ನೆರೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿಯಿದೆ. ಇಲ್ಲಿ ಮಾತ್ರ ಅನುಮತಿ ಸಿಗುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.