ಹೊನ್ನಾವರ-ಮೇವಿಗೆ ತೆರಳಿದ್ದ ಹಸುವನ್ನು ಕೊಂದ ದುರುಳರು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದಿದ್ದಾರೆ. ಅದಾದ ನಂತರ ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮಾಂಸವನ್ನು ಸಾಗಿಸಿದ್ದಾರೆ. ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಹೊನ್ನಾವರದ ತಾಲೂಕಿನ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಎಂಬಾತರು ಅತ್ಯಂತ ಆರೈಕೆಯಿಂದ ಜಾನುವಾರು ಸಾಕಣಿಕೆ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಮೇವಿಗೆ ಹೋದ ಅವರ ಹಸು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಭಾನುವಾರ ಅವರು ಹಸುವನ್ನು ಹುಡುಕಿ ಕಾಡಿನ ಕಡೆ ಹೆಜ್ಜೆ ಹಾಕಿದರು.
ಅರಣ್ಯದಂಚಿನ ಪ್ರದೇಶದಲ್ಲಿ ಹಸುವಿನ ಶವ ಕಂಡು ಕೃಷ್ಣ ಆಚಾರಿ ಆಘಾತಕ್ಕೆ ಒಳಗಾದರು. ಹಸುವಿನ ರುಂಡ ಕತ್ತರಿಸಿದ್ದ ದುರುಳರು ಗರ್ಭದಲ್ಲಿದ್ದ ಕರುವನ್ನು ಸಹ ಕಿತ್ತು ಅಲ್ಲಿಯೇ ಬಿಸಾಡಿದ್ದರು. ಕಾಲುಗಳನ್ನು ಸಹ ಕತ್ತರಿಸಿ ತುಂಡು ತುಂಡಾಗಿಸಿದ್ದರು. ಹಸುವಿನ ಮಾಂಸವನ್ನು ಬೇರ್ಪಡಿಸಿ ಅದನ್ನು ಅಲ್ಲಿಂದ ಸಾಗಿಸಿದ್ದರು. ಅಲ್ಲಿ ಬಿದ್ದಿದ್ದ ರಕ್ತ, ಎಲುಬು ಹಾಗೂ ಸಾವನಪ್ಪಿದ ಕರು ನೋಡಿದ ಕೃಷ್ಣ ಆಚಾರಿ ಊರಿನ ಜನರಿಗೆ ಸುದ್ದಿ ಮುಟ್ಟಿಸಿದರು.
ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಈ ಭಾಗದ ಅನೇಕ ಕಡೆ ಜಾನುವಾರು ನಾಪತ್ತೆ ಆಗುತ್ತಿದ್ದು, ಚಿರತೆ ಮೇಲೆ ಜನ ಅನುಮಾನ ಪಟ್ಟಿದ್ದರು. ಆದರೆ, ಇದೀಗ `ಹಸು ಭಕ್ಷಿಸಿದ ದುರುಳರೇ ಜಾನುವಾರು ನಾಪತ್ತೆ ಪ್ರಕರಣದ ರೂವಾರಿ’ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.