ಭಟ್ಕಳ-ಭಟ್ಕಳ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಕ್ವಾಲಿಟಿ ಹೋಟೆಲ್ ಬಳಿ ಟೆಂಪೋವೊಂದು ನಿಯಂತ್ರಣ ತಪ್ಪಿ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೆಬಳೆಯ ಗಾಂಧಿ ನಗರದ ನಿವಾಸಿ ಯೋಗೀಶ್ ನಾಗಪ್ಪ ನಾಯ್ಕ (೨೯) ಸಾವನಪ್ಪಿದ್ದಾರೆ.
ಅಪಘಾತದಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೆಂಪೋ ಮೊದಲಿಗೆ ಯೋಗೇಶ್‌ಗೆ ಬಡಿದಿದೆ. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ನಂತರ ವಿದ್ಯುತ್ ಬಿಲ್ ಪಾವತಿಸಲು ತೆರಳುತ್ತಿದ್ದ ಬೆಳಕೆಯ ಮಹೇಶ ಮೊಗೇರ ಮತ್ತು ಶೇಖರ ಮೊಗೇರ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಶಿರೂರು ಮೂಲದ ಮುಜ್ದಲಿಫಾ ಸ್ಕೂಟರಿಗೆ ಬಡಿದಿದೆ. ಹನೀಫಾಬಾದ್ ನಿವಾಸಿ ನಯೀಮ್ ಕಮ್ರಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಕಾಯ್ಕಿಣಿ ತೆರ್ನಮಕ್ಕಿ ನಿವಾಸಿ ಗಣೇಶ ಎಂಬವರು ಇತ್ತೀಚೆಗೆ ಖಾಸಗಿ ಶಾಲೆಯಿಂದ ಸೆಕೆಂಡ್ ಹ್ಯಾಂಡ್ ಟೆಂಪೋ ಖರೀದಿಸಿದ್ದರು. ಅದನ್ನು ಬದಲಾಯಿಸಲು ಬೈಂದೂರಿಗೆ ಕೊಂಡೊಯ್ಯುತ್ತಿದ್ದರು. ಭಟ್ಕಳದ ಕ್ವಾಲಿಟಿ ಹೊಟೇಲ್ ಬಳಿ ತಲುಪಿದಾಗ ಟೆಂಪೋದ ಸ್ಟೇರಿಂಗ್ ತಿರುಗದೇ ಅಪಘಾತ ನಡೆದಿದೆ.