ದಾಂಡೇಲಿ-ವೈದ್ಯರೊಬ್ಬರನ್ನು ಬೆದರಿಸಿ ಅವರಿಂದ 2.5 ಲಕ್ಷ ರೂ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ಪತ್ರಕರ್ತರಿಗೆ ದಾಂಡೇಲಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದ ಮೂವರು ಫೆ 9ರಂದು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಪ್ರಕೃತಿ ಚಿಕಿತ್ಸೆ ಮಾಡುವ ಅಶೋಕ ಪರಬ ಅವರ ಬಳಿ `ನೀನು ನಕಲಿ ವೈದ್ಯ’ ಎಂದು ವರದಿ ಪ್ರಸಾರ ಮಾಡುವ ಬಗ್ಗೆ ಬೆದರಿಸಿದ್ದರು. ವರದಿ ಪ್ರಸಾರ ಮಾಡದೇ ಇರಲು 2.5 ಲಕ್ಷ ರೂ ನೀಡುವಂತೆ ಬೇಡಿಕೆ ಒಡ್ಡಿದ್ದರು. ಇದಕ್ಕೆ ಆ ವೈದ್ಯರು ಒಪ್ಪಿರಲಿಲ್ಲ. ಹೀಗಾಗಿ ಯೂಟೂಬ್ ಚಾನಲ್ ಒಂದರಲ್ಲಿ ದಾಂಡೇಲಿ ವೈದ್ಯ ನಕಲಿ ಎಂಬ ಬಗ್ಗೆ ವರದಿಯನ್ನು ಬಿತ್ತರಿಸಿದ್ದರು.
ಅದಾದ ನಂತರ ಮತ್ತೆ ಆ ವೈದ್ಯರನ್ನು ಭೇಟಿ ಮಾಡಿ `ಕಾಸು ಕೊಡದೇ ಇದ್ದರೆ ದೊಡ್ಡ ದೊಡ್ಡ ಚಾನಲ್ಗಳಲ್ಲಿ ಸುದ್ದಿ ಪ್ರಸಾರವಾಗಲಿದೆ’ ಎಂದು ಬೆದರಿಸಿದ್ದರು. ಫೆ 13ರಂದು ಸಹ ದಾಂಡೇಲಿಗೆ ಬಂದು ಹಣಕ್ಕಾಗಿ ಪೀಡಿಸಿದ್ದರು. ಇದಲ್ಲದೇ ಪದೇ ಪದೇ ಫೋನ್ ಮಾಡಿ ಬೆದರಿಸುತ್ತಿದ್ದರು. ಈ ಹಿನ್ನಲೆ ಅಶೋಕ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಹುಬ್ಬಳ್ಳಿಯ ವಿಜಯ ಮೇತ್ರಾಣಿ, ಧರ್ಮರಾಜ ಕರಾಠೆ, ಸತೀಶ ಕೇದಾರಿ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.