ಸಿದ್ದಾಪುರ : ಕಳೆದ ಎರಡು ದಶಕಗಳಿಂದ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದಾಪುರ ತಾಲೂಕಿನ ಶಿವಶಂಕರ್ ಕೋಲಸಿರ್ಸಿ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ದಾಪುರದ ಹಿರಿಯ ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಅಕಾಲಿಕ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕದ ಪರವಾಗಿ ಜಿಲ್ಲಾಧ್ಯಕ್ಷ ನಾಗರಾಜ್ ಅರ್ಜುನ ದೈವಜ್ಞ ಮುಂಡಗೋಡ್ ಅವರು ತೀವ್ರ ಸಂತಾಪ ಸೂಚಿಸಿ , ಅವರ ನಿಧನದಿಂದ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಮೃತರಿಗೆ 44ವಯಸ್ಸಾಗಿತ್ತು. ಅವರು Tv-9 ಚಾನೆಲ್ ನಲ್ಲಿ ಕೆಲ ವರ್ಷಗಳ ಕಾಲ ಉತ್ತರಕನ್ನಡ ಜಿಲ್ಲಾ ವರದಿಗಾರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕರಾವಳಿ ಮುಂಜಾವು ಸೇರಿದಂತೆ ಕನ್ನಡ ಜನಾಂತರಂಗ ಸ್ಥಳೀಯ ಎರಡು ಪತ್ರಿಕೆಗಳಲ್ಲಿ ಸ್ಟ್ರಿಂಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ರಾಜ್ ನ್ಯೂಸ್ ನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಮಂಗಳವಾರ ಸಹ ವರದಿಗಾರಿಕೆಗೆ ತೆರಳಿದ್ದರು. ಆರೋಗ್ಯದಲ್ಲಿ ಯಾವುದೇ ಏರುಪೇರು ಇರಲಿಲ್ಲ.ವರದಿಗಾರಿಕೆ ಜೊತೆಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕರಾಗಿ ಕೂಡ ಕೆಲಸ ಮಾಡುತ್ತಿದ್ದರು.ಮಂಗಳವಾರ ತಡರಾತ್ರಿ ಏಕಾಏಕಿಯಾಗಿ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಮುನ್ನ ಶಿವಶಂಕರ್ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ. ಮೃತರ ಕುಟುಂಬಕ್ಕೆ ದೇವರು ನೋವು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಸದಸ್ಯರು ಬೇಡಿಕೊಂಡಿದ್ದಾರೆ. ಸ್ಥಳೀಯ ವರದಿಗಾರರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಸಂತಾಪ ಸೂಚಿಸಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಸಂತಾಪ ಸೂಚಿಸಿದ್ದಾರೆ.