ಶಿರಸಿ-ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ತಡೆದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಕೊನೆಗೆ ಎಂಜಲು ಕಾಸಿಗೆ ಕೈ ಒಡ್ಡಿದ್ದಾರೆ. ಚಂದ್ರಶೇಖರ್ ಹುದ್ದಾರ್ ಹಣ ಸ್ವೀಕರಿಸಿದ ವಿಡಿಯೋ ವೈರಲ್ ಆದ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೂರು ದಿನದ ಹಿಂದೆ ಶಿರಸಿ ಅಮಿನಳ್ಳಿಯ ಯುವಕರಿಬ್ಬರು ಬೈಕಿನಲ್ಲಿ ಆಸ್ಪತ್ರೆಗೆ ಹೊರಟಿದ್ದರು. ತಪಾಸಣೆಯಲ್ಲಿ ನಿರತ ಪೊಲೀಸರು ಅವರನ್ನು ಅಡ್ಡಗಟ್ಟಿದರು. ಆ ವೇಳೆ ಚಂದ್ರಶೇಖರ್ ಹುದ್ದಾರ್ ವಿವಿಧ ದಾಖಲೆಗಳನ್ನು ಕೇಳಿದರು. ಆ ಬೈಕಿಗೆ ವಿಮೆ ಇರಲಿಲ್ಲ. ಹೊಗೆ ತಪಾಸಣಾ ಪತ್ರವನ್ನು ಅವರು ಹೊಂದಿರಲಿಲ್ಲ. ಜೊತೆಗೆ ಬೈಕಿನಲ್ಲಿ ಸಂಚರಿಸುತ್ತಿರುವವರು ಹೆಲ್ಮೆಟ್ ಸಹ ಧರಿಸಿರಲಿಲ್ಲ.
ಆಗ, ಚಂದ್ರಶೇಖರ್ ಹುದ್ದಾರ್ ಅವರು ಯುವಕರಿಬ್ಬರಿಗೂ ಬುದ್ದಿವಾದ ಹೇಳಿದರು. `ಸಾವಿರ ರೂ ಹೆಲ್ಮೆಟ್ ಧರಿಸದೇ ಇದ್ದಾಗ ಅಪಘಾತ ನಡೆದರೆ ನಿಮ್ಮ ಕುಟುಂಬಕ್ಕೆ 10-15 ಲಕ್ಷ ರೂ ಹಾನಿಯಾಗುತ್ತದೆ. ಎಲ್ಲೆಲ್ಲಿಯೂ ಹಣ ಖಾಲಿ ಮಾಡುತ್ತೀರಿ. ಆದರೆ, 60-70ರೂ ವೆಚ್ಚ ಮಾಡಿ ಹೊಗೆ ತಪಾಸಣಾ ಪತ್ರವನ್ನು ಮಾಡಿಸಿಲ್ಲ’ ಎಂದು ಬೈಕ್ ಸವಾರರನ್ನು ತರಾಟೆಗೆ ತೆಗೆದುಕೊಂಡರು.
`ತಲೆಗೆ ಪೆಟ್ಟಾದರೆ ನಿಮ್ಮ ತಂದೆ-ತಾಯಿ, ಹೆಂಡತಿ-ಮಕ್ಕಳಿಗೂ ಸಮಸ್ಯೆ. ಪ್ರತಿಯೊಬ್ಬರು ಒಂದೇ ಸಲ ಹುಟ್ಟಿ ಬರುವುದು. ಪದೇ ಪದೇ ಹುಟ್ಟಿ ಬರುವುದಿಲ್ಲ. ಎಲ್ಲಾದರೂ ತಲೆಗೆ ಪೆಟ್ಟಾದರೆ ಏನು ಗತಿ?’ ಎಂದು ಪ್ರಶ್ನಿಸಿದರು. ಆಗ, ಆ `ಯುವಕರು ತಮ್ಮಿಂದ ತಪ್ಪಾಗಿದೆ’ ಎಂದು ಕ್ಷಮೆ ಕೇಳಿದರು.
ಅದಾಗಿಯೂ ಬಿಡದ ಚಂದ್ರಶೇಖರ್ ಹುದ್ದಾರ್ `ಕೋರ್ಟಿಗೆ ನಾವು ಕೇಸ್ ಕೊಡಬೇಕು. ಅದು ಏನೇನು ಲೋಪವಾಗಿದೆ ಎಲ್ಲವನ್ನು ಪಟ್ಟಿ ಮಾಡಿ ದಂಡ ಪಾವತಿಸಿ’ ಎಂದು ಸೂಚಿಸಿದರು. ಇಲ್ಲಿವರೆಗೂ ಚಂದ್ರಶೇಖರ್ ಹುದ್ದಾರ್ ಅವರು ಆಡಿದ ಮಾತುಗಳೆಲ್ಲವೂ ನೂರಕ್ಕೆ ನೂರು ಸತ್ಯವಾಗಿದ್ದವು. ಈ ವೇಳೆ ಆ ಯುವಕರು ಹಣ ಹಿಡಿದು ಆಮೀಷ ಒಡ್ಡಿದರೂ ಚಂದ್ರಶೇಖರ್ ಹುದ್ದಾರ್ ಅದನ್ನು ಸ್ವೀಕರಿಸಲು ಒಪ್ಪಿರಲಿಲ್ಲ.
ಆದರೆ, ಕೊನೆಕ್ಷಣದಲ್ಲಿ ಅವರು ಕೊಟ್ಟ ಕಾಸು ಸ್ವೀಕರಿಸಿ ಚಂದ್ರಶೇಖರ್ ಹುದ್ದಾರ್ ತಪ್ಪು ಮಾಡಿದರು. ಜೊತೆಗೆ ಆ ಯುವಕರಿಬ್ಬರನ್ನು ಬಿಟ್ಟು ಕಳುಹಿಸಿದರು. ಆದರೆ, ಚಂದ್ರಶೇಖರ್ ಹುದ್ದಾರ್ ಅವರು ಬೈಕ್ ಸವಾರರನ್ನು ತಡೆದು ವಿಚಾರಣೆಗೊಳಪಡಿಸಿದ ಎಲ್ಲಾ ವಿಧಾನವನ್ನು ಆ ಯುವಕರು ವಿಡಿಯೋ ಮಾಡಿದ್ದರು. ಕೊನೆಗೆ ಅವರು ಲಂಚ ಸ್ವೀಕರಿಸಿದ್ದು ಸಹ ಆ ವಿಡಿಯೋದಲ್ಲಿ ದಾಖಲಾಗಿತ್ತು. ತಪಾಸಣಾನಿರತ ಪೊಲೀಸ್ ಸಿಬ್ಬಂದಿ ನಿಯಮಾನುಸಾರ `ಬಾಡಿ ಕ್ಯಾಮರಾ’ ಸಹ ಹೊಂದಿರದೇ ಲೋಪ ಎಸಗಿದ್ದರು.
ಈ ವಿಡಿಯೋ ವೈರಲ್ ಆದ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಅವರ ಮೇಲಿನ ವಿಚಾರಣೆ ಬಾಕಿಯಿರಿಸಿ ಅಮಾನತು ಆದೇಶ ಹೊರಡಿಸಿದರು.