ಭಟ್ಕಳ-ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಮ್ಮ ಜಾತಿಯ ಬಗ್ಗೆ ಸರ್ಕಾರಕ್ಕೆ ಸುಳ್ಳು ಹೇಳಿದ ಆರೋಪ ಎದುರಿಸುತ್ತಿದ್ದಾರೆ.
ಸದ್ಯ ಮೀನುಗಾರಿಕೆ, ಒಳನಾಡು ಮತ್ತು ಜಲ ಸಾರಿಗೆ ಸಚಿವರಾಗಿರುವ ಮಂಕಾಳು ವೈದ್ಯ ಅವರು 2007-2009ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದರು. ಆ ವೇಳೆ `ತಾನು ಮೊಗೇರ್ ಎಂಬ ಪರಿಶಿಷ್ಟ ಜಾತಿಗೆ ಸೇರಿದವ’ ಎಂದು ಅವರು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಉಪಾಧ್ಯಕ್ಷರಾಗಿದ್ದರು.
ಆದರೆ, ಮಂಕಾಳು ವೈದ್ಯ ಅವರು ಪ್ರವರ್ಗ-1ಕ್ಕೆ ಸೇರಿದ ಸಮುದಾಯದವರಾಗಿದ್ದಾರೆ. ಅವರು ಪರಿಶಿಷ್ಟ ಎಂದು ಸುಳ್ಳು ಹೇಳಿ ಅಧಿಕಾರ ಅನುಭವಿಸಿದ್ದಾರೆ’ ಎಂಬುದು ಅವರ ಮೇಲಿರುವ ಆರೋಪ. ಹೀಗಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ರಕ್ಷಣಾ ವೇದಿಕೆಯು ಮಂಕಾಳು ವೈದ್ಯರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
`ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು’ ಎಂದು ದೂರುದಾರರು ಆಗ್ರಹಿಸಿದ್ದಾರೆ.