ಶಿರಸಿ-ಸರ್ಕಾರಿ ಕಚೇರಿಯಲ್ಲಿ ಕುಳಿತು ಲೆಕ್ಕ ಬರೆಯುವ ಬದಲು ಲಂಚಕ್ಕೆ ಕೈ ಒಡ್ಡುತ್ತಿದ್ದ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಪಂಚಾಯತ ರಾಜ್ ಇಂಜಿನಿಯರಿAಗ್ ಕಚೇರಿಯ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಲೆಕ್ಕಾಧಿಕಾರಿ ಸುರೇಶ ಬೀಳಗಿ 10 ಸಾವಿರ ರೂಪಾಯಿಯ ಲಂಚದ ಹಣದ ಜೊತೆ ಸಿಕ್ಕಿ ಬಿದ್ದಿದ್ದಾರೆ.
ಪಂಚಾಯತ ರಾಜ್ ಇಲಾಖೆಯಲ್ಲಿ ಸುರೇಶ ಬೀಳಗಿ ಪ್ರಥಮ ದರ್ಜೆಯ ಲೆಕ್ಕಾಧಿಕಾರಿಯಾಗಿದ್ದರು. ಯಾವ ಕೆಲಸ ಆಗಬೇಕಿದ್ದರೂ ಜನ ಮೊದಲು ಲೆಕ್ಕಾಧಿಕಾರಿಯನ್ನು ಸಂಪರ್ಕಿಸುತ್ತಿದ್ದರು. ಆಯಾ ಕೆಲಸಕ್ಕೆ ತಕ್ಕಂತೆ ಸುರೇಶ ಬೀಳಗಿ ಹಣಕಾಸಿನ ಲೆಕ್ಕ ಹೇಳುತ್ತಿದ್ದರು. ಲೆಕ್ಕಾಚಾರದ ಪ್ರಕಾರ ಹಣ ತಲುಪಿದ ನಂತರ ಕೆಲಸ ಮಾಡಿಕೊಡುತ್ತಿದ್ದರು.
ಕಿರಣ ಎಂಬ ಗುತ್ತಿಗೆದಾರರಿಗೆ ಈ ಕಚೇರಿಯಿಂದ ಹಣ ಪಾವತಿ ಆಗಬೇಕಿತ್ತು. ವಾಹನ ಬಾಡಿಗೆಗೆ ಸಂಬAಧಿಸಿದ ಹಣ ಪಾವತಿ ಸಂಬAಧ ಕಿರಣ ಅವರು ಸುರೇಶ ಬೀಳಗಿ ಅವರನ್ನು ಭೇಟಿ ಮಾಡಿದ್ದರು. ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಬೇಡಿದ ಸುರೇಶ ಬೀಳಗಿ ಕೊನೆಗೆ 10 ಸಾವಿರ ರೂ ಹಣಕ್ಕೆ ಕೈ ಒಡ್ಡಿದ್ದರು.
ಭ್ರಷ್ಟಾಚಾರ ವಿರೋಧಿಯಾಗಿರುವ ಕಿರಣ ಅವರು ಭ್ರಷ್ಟ ಲೆಕ್ಕಾಧಿಕಾರಿಯ ಬಣ್ಣ ಬಯಲು ಮಾಡಲು ಉದ್ದೇಶಿಸಿದ್ದರು. ಅದರ ಪ್ರಕಾರ ಸುರೇಶ ಬೀಳಗಿ ಲಂಚ ಬೇಡಿದ ದಾಖಲೆಗಳ ಜೊತೆ ಅವರು ಲೋಕಾಯುಕ್ತರನ್ನು ಭೇಟಿ ಮಾಡಿದ್ದರು.
ಭ್ರಷ್ಟ ಲೆಕ್ಕಾಧಿಕಾರಿಯನ್ನು ಬಲೆಗೆ ಬೀಳಿಸಿಕೊಳ್ಳಲು ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ್ ಅವರು ಕಾರ್ಯತಂತ್ರ ರೂಪಿಸಿದರು. ತಮ್ಮ ತಂಡದ ಜೊತೆ ಸಿದ್ಧರಾದ ಅವರು ಸರ್ಕಾರಿ ಕೆಲಸ ಮಾಡಿಕೊಡಲು ಸುರೇಶ ಬೀಳಗಿ ಹಣ ಪಡೆಯುವ ವೇಳೆಯಲ್ಲಿಯೇ ದಾಳಿ ನಡೆಸಿದರು.
ತಕ್ಷಣ ಸುರೇಶ ಬೀಳಗಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಲಂಚ ಬೇಡಿದ ಸಾಕ್ಷಿಗಳನ್ನು ಸಂಗ್ರಹಿಸಿದರು. 10 ಸಾವಿರ ರೂಪಾಯಿಗಾಗಿ ಕೈವೊಡ್ಡಿದ ಸುರೇಶ ಬೀಳಗಿ ಜೈಲು ಪಾಲಾದರು.