ಭಟ್ಕಳ: ಅನಾದಿ ಕಾಲದಿಂದ ಭಟ್ಕಳ ನಗರ ಭಾಗದ ರಾಜಾಂಗಣದಲ್ಲಿ (ಹಳೇ ಬಸ್ ನಿಲ್ದಾಣ) ಪುರಸಭೆ ವ್ಯಾಪ್ತಿಯಲ್ಲಿ ಬರುವ ಮೀನು ಮಾರುಕಟ್ಟೆಯ ಬಗ್ಗೆ ಅಪಪ್ರಚಾರ ಮಾಡುತ್ತ ಒಂದು ಕೋಮಿನ ಒಂದು ಸಂಸ್ಥೆಯ ಹೆಸರನ್ನು ಮುಂದಿಟ್ಟುಕೊಂಡು ಕೆಲವು ಖಾಸಗಿ ವ್ಯಕ್ತಿಗಳು ಧರ್ಮದ ಆಧಾರದ ಮೇಲೆ ಸಂತೆ ಮಾರುಕಟ್ಟೆಯಲ್ಲಿನ ಹೊಸ ಮೀನು ಮಾರುಕಟ್ಟೆಗೆ ಬರುವಂತೆ ಮೀನು ವ್ಯಾಪಾರೀಕರಣಕ್ಕೆ ಒಂದು ಧರ್ಮದವರಿಗೆ ಪ್ರಚೋಧನೆ ಹಾಗೂ ಒತ್ತಡ ಹೇರುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಸೋಮವಾರದಂದು ಹಿಂದು ಜಾಗರಣಾ ವೇದಿಕೆಯಿಂದ ಭಟ್ಕಳ ಉಪ ವಿಭಾಗದ ಪೋಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ಬರುವ ಭಟ್ಕಳ ನಗರ ಭಾಗದ ರಾಜಾಂಗಣದಲ್ಲಿ (ಹಳೇ ಬಸ್ ನಿಲ್ದಾಣ) ನೂರಾರು ವರ್ಷಗಳ ಇತಿಹಾಸವಿರುವ ಮೀನು ಮಾರುಕಟ್ಟೆಯಿದ್ದು, 150 ರಿಂದ 200 ಮಹಿಳಾ ಹಾಗೂ ಪುರುಷ ಮೀನು ಮಾರಾಟಗಾರರು ಮೀನು ಮಾರುತ್ತ ಬಂದಿರುತ್ತಾರೆ. ಈ ಮೀನು ಮಾರುಕಟ್ಟೆಯನ್ನು ಅವಲಂಬಿಸಿ ಹಿಂದಿನಿಂದಲೂ ಹಲವು ತರಕಾರಿ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು ಹಂಪಲ ಹಾಗೂ ಇನ್ನಿತರ ಆಹಾರ ಪದಾರ್ಥಗಳ ಅಂಗಡಿ ಮುಗ್ಗಟ್ಟುಗಳು ಹಾಗೂ ರಿಕ್ಷಾ ಚಾಲಕರು ತಮ್ಮ ವ್ಯಾಪಾರ ಜೀವನ ಸಾಗಿಸುತ್ತಾ ಬಂದಿರುತ್ತಾರೆ. ಈ ವಹಿವಾಟುಗಳನ್ನು ಮಾಡಿಕೊಂಡು ಮಾರುಕಟ್ಟೆಯನ್ನು ಈ ಹಿಂದೆಯೂ ಕಾಲಕಾಲಕ್ಕೆ ನವೀಕರಣಗೊಳಿಸಿ ಅದೇ ಜಾಗದಲ್ಲಿ ಮುಂದುವರೆಸಿಕೊಂಡು ಬರಲಾಗಿದೆ.
ರಾಜಾಂಗಣ (ಹಳೇ ಬಸ್ ನಿಲ್ದಾಣ) ಮಾರುಕಟ್ಟೆ ವ್ಯವಸ್ಥೆಯು ಹಿಂದಿನಿಂದಲೂ ಎಲ್ಲಾ ರೀತಿಯ ಆಹಾರ ಪದಾರ್ಥಗಳ ವ್ಯಾಪಾರ ಕೇಂದ್ರವಾಗಿದ್ದು, ಎಲ್ಲರೂ ಯಾವುದೇ ಪಕ್ಷಭೇದ, ಧರ್ಮಭೇದವಿಲ್ಲದೇ ವ್ಯಾಪಾರ ನಡೆಸಿಕೊಂಡು ಸೌಹಾರ್ದಯುತವಾಗಿ ಬಂದಿರುತ್ತಾರೆ.
ಪುರಾತನ ಮೀನು ಆದರೆ ಪುರಸಭೆಯು ಇತ್ತೀಚೆಗೆ ಸಂತೆ ಮಾರ್ಕೆಟನಲ್ಲಿರುವ 60 ಜನ ಮೀನು ಮಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಮೀನು ಮಾರುಕಟ್ಟೆಯನ್ನು ಈ ತಿಂಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭಿಸಿರುತ್ತಾರೆ. ಆ ದಿನದಿಂದ ಹೊಸ ಮೀನು ಮಾರುಕಟ್ಟೆಯ ಒಳಗೆ ಒಂದು ಕೋಮಿನ (ಮುಸ್ಲಿಂ) ಒಂದು ಸಂಸ್ಥೆಯ ಹೆಸರನ್ನು ಮುಂದಿಟ್ಟುಕೊಂಡು ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಧರ್ಮದವರು ಹೊಸ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಸುವಂತೆ ವಿವಿಧ ರೀತಿಯಲ್ಲಿ ಮೀನು ವ್ಯಾಪಾರೀಕರಣಕ್ಕೆ ಧರ್ಮದ ಆಧಾರದ ಮೇಲೆ ಒಂದು ಧರ್ಮದವರಿಗೆ ಪ್ರಚೋಧನೆ ಹಾಗೂ ಒತ್ತಡ ಹೇರುತ್ತಿರುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ ನ್ಯೂಸ್‌ಗಳಲ್ಲಿ ಪ್ರಸಾರವಾಗಿರುತ್ತದೆ. ಅಲ್ಲದೇ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಬಗ್ಗೆ ಸ್ವಚ್ಛತೆಯ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿರುವುದು ಸಹ ಕಂಡು ಬಂದಿರುತ್ತದೆ.
ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಸರಿಯಾದ ಸ್ವಚ್ಚತೆಗೆ ಮತ್ತು ನವೀಕರಣಕ್ಕೆ ಆದ್ಯತೆ ನೀಡುವಂತೆ ಪರಸಭೆ ಅಧಿಕಾರಿಗಳಿಗೆ ಯಾವತ್ತೂ ಆಗ್ರಹಿಸದ ಈ ವ್ಯಕ್ತಿಗಳು ಗೌಪ್ಯ ಅಜೆಂಡಾವನ್ನು ಮಾರುಕಟ್ಟೆಯನ್ನು ತೆಗೆದು ಒಂದು ಕೋಮಿನ ಒಂದು ಸಂಸ್ಥೆಯ ಇಚ್ಛೆಯಂತೆ ಬೇರೆದೇ ರೀತಿಯ ವಾಣಿಜ್ಯ ಇಟ್ಟುಕೊಂಡು ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಗೆ ಯಾರೂ ಬರದಂತೆ ಮಾಡಿ ಅಲ್ಲಿನ ಮೀನು ಮಳಿಗೆಯನ್ನು ಕಟ್ಟುವ ಮೂಲಕ ಅಲ್ಲಿನ ಬಡ ಮೀನು ವ್ಯಾಪಾರಿಗಳನ್ನು ಹಾಗೂ ಇನ್ನಿತರ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಪುರಸಭೆಯ ಅಧಿಕಾರಿಗಳು ಸಹ ಅವರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಹಾಗೂ ಪುರಸಭೆ ಅಧಿಕಾರಿಗಳು ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಸ್ವಚ್ಛತೆಯ ದೃಷ್ಠಿಯಿಂದ ಸಣ್ಣ ಪುಟ್ಟ ರಿಪೇರಿಗಳಿಗೆ ಆದ್ಯತೆ ನೀಡದಿರುವುದು ಅಲ್ಲಿನ ಬಡ ಮೀನು ವ್ಯಾಪಾರಿಗಳ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇವರಲ್ಲಿ ಕೆಲವರು ಒಂದು ಕಡೆ ಸೌಹಾರ್ಧತೆಯ ಹೆಸರಿನಲ್ಲಿ ಅಧಿಕಾರಿಗಳನ್ನು ವಿವಿಧ ಗಣ್ಯರನ್ನು ಕರೆದು ಸೌಹಾರ್ಧತೆಯ ಸಭೆ ಸಮಾರಂಭಗಳನ್ನು ಮಾಡಿ ಸೌಹಾರ್ಧತೆಯ ನಾಟಕ ಮಾಡುವ ಇವರು ಇನ್ನೊಂದು ಕಡೆ ತಮ್ಮ ನಿಜವಾದ ಮುಖವಾಡದ ಮೂಲಕ ಧರ್ಮಾಧಾರಿತವಾಗಿ ತಮ್ಮದೇ ಕೋಮಿನ ಜನರಿಗೆ ಪ್ರಚೋಧನೆ ಹಾಗೂ ಒತ್ತಡ ಹಾಕುವ ಮೂಲಕ ಒಂದು ಸಂಸ್ಥೆಯ ಖಾಸಗಿ ಇಚ್ಛೆಯಂತೆ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ. ಭಟ್ಕಳವು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ರೀತಿ ಕಳೆದ ಎಂಟೊಂಬತ್ತು ದಿನಗಳಿಂದ ಬಹಿರಂಗವಾಗಿ ಹೊಸ ಮೀನು ಮಾರುಕಟ್ಟೆಯಲ್ಲಿ ಒಂದು ಕೋಮಿನ ಮುಖಂಡರು ಬಂದು ವರ್ತಿಸುತ್ತಿರುವ ರೀತಿಯು ಆತಂಕಕ್ಕೆ ಕಾರಣವಾಗಿರುವುದಲ್ಲದೇ ಮುಂದಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಸಹ ಕಾರಣೀಕರ್ತರಾಗಬಲ್ಲರು.
ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಬಗ್ಗೆ ಅಪಪ್ರಚಾರ ಹಾಗೂ ಒಂದು ಕೋಮಿನ ಒಂದು ಸಂಸ್ಥೆಯ ಹೆಸರಿನಲ್ಲಿ ಅವರದೇ ಕೋಮಿನ ಜನರನ್ನು ಹೊಸ ಮೀನು ಮಾರುಕಟ್ಟೆಗೆ ಬರುವಂತೆ ಬಹಿರಂಗವಾಗಿ ಧರ್ಮಾಧಾರಿತವಾಗಿ ವಿವಿಧ ರೀತಿಯಲ್ಲಿ ಪ್ರಚೋಧನೆ ಹಾಗೂ ಒತ್ತಡ ಹೇರುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆ ಭಟ್ಕಳ ಘಟಕದ ಸಂಯೋಜಕ ಜಯಂತ ಬೆಣಂದೂರು, ಹಿಂ.ಜಾ.ವೇ. ಪದಾಧಿಕಾರಿ ಕುಮಾರ ನಾಯ್ಕ ಹನುಮಾನನಗರ, ನಾಗೇಶ ನಾಯ್ಕ ಹೆಬಳೆ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಇದ್ದರು.