ಅಂಕೋಲಾ: ಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾ ಕೊಡಮಾಡುವ ವಾರ್ಷಿಕ ಪ್ರಶಸ್ತಿ “ಬಾರ್ಡೋಲಿ ಗೌರವ ಪ್ರಶಸ್ತಿ-2025 ನ್ನು ಪತ್ರಿಕೋದ್ಯಮ, ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ಮೂರು ದಶಕಗಳ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ, ಶಿಕ್ಷಕ, ಪ್ರಗತಿಪರ ಚಿಂತಕ ಎಂ.ಆರ್.ಮಾನ್ವಿಯವರಿಗೆ ಅಂಕೋಲಾದ ಗೋಕಲೆ ಸೆಂಟಿನರಿ ಕಾಲೇಜಿನಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪ್ರದಾನಿಸಿದರು.
ನಂತರ ಮಾತನಾಡಿದ ಅವರು, ಪತ್ರಕರ್ತರೆಂದರೆ ನಮ್ಮ ದೇಶದ ಬೆನ್ನೆಲುಬು, ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವದ್ದಾಗಿದೆ.ದೇಶ ಸದೃಢವಾಗಿ ಬೆಳೆಯಬೆಕೆಂದರೆ ಪತ್ರಕರ್ತರ ಶ್ರಮ ಅತ್ಯಗತ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ವಾರ್ತಾಭಾರತಿಯ ಹಿರಿಯ ಪತ್ರಕರ್ತ ಎಂ.ಆರ್.ಮಾನ್ವಿ, ಈ ಪ್ರಶಸ್ತಿ ನನ್ನ ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ಸಮಗ್ರ ಪತ್ರಿಕೋದ್ಯಮದ ಪರಿಶ್ರಮಕ್ಕೆ ಸಿಕ್ಕ ಗೌರವ. ಲೇಖನಿ ದೇವರ ಕೊಡುಗೆ, ಅದನ್ನು ಸತ್ಯ ಮತ್ತು ಸಮಾಜದ ಪರವಾಗಿ ಬಳಸುವುದು ಪತ್ರಕರ್ತನ ಕರ್ತವ್ಯ,” ಎಂದು ಅಭಿಪ್ರಾಯಪಟ್ಟರು. ಪತ್ರಕರ್ತನು ಕೇವಲ ಸುದ್ದಿಗಾರನಲ್ಲ; ಅವನು ಸಮಾಜದ ಕಣ್ಣು, ಕಿವಿ ಮತ್ತು ಧ್ವನಿ. ಅನ್ಯಾಯವನ್ನು ಬಯಲಿಗೆಳೆದು, ಹಿಂದುಳಿದವರ ಪರವಾಗಿ ಮಾತನಾಡಿ, ಸತ್ಯವನ್ನು ಪರಿಶೀಲಿಸಿ ಜನರ ಮುಂದೆ ತರುವುದೇ ನಮ್ಮ ಧರ್ಮ,” ಎಂದು ಅವರು ಒತ್ತಿ ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೇಗಕ್ಕಿಂತ ಸತ್ಯಕ್ಕೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಎಚ್ಚರಿಸಿದ ಅವರು, ತಡವಾದರೂ ಸತ್ಯ ಸುದ್ದಿಯನ್ನು ನೀಡೋಣ, ಇದರಿಂದ ಸಮಾಜದ ಸುರಕ್ಷಿತವಾಗಿರುತ್ತದೆ. ಬಾರ್ಡೋಲಿ ಗೌರವ ಪ್ರಶಸ್ತಿ ನನಗೆ ಕೇವಲ ಸನ್ಮಾನವಲ್ಲ, ಹೊಸ ಜವಾಬ್ದಾರಿ. ಮುಂದಿನ ದಿನಗಳಲ್ಲಿ ನ್ಯಾಯ, ಸತ್ಯ ಮತ್ತು ಮಾನವೀಯತೆಗೆ ಬದ್ಧವಾದ ಪತ್ರಿಕೋದ್ಯಮ ಬೆಳೆಸುವುದೇ ನನ್ನ ಪ್ರತಿಜ್ಞೆ,” ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಕೋಲಾ ತಹಸಿಲ್ದಾರ್ ಡಾ.ಚಿಕ್ಕಪ್ಪ ನಾಯಕ, ಶೋಷಿತವರ್ಗದ ದ್ವನಿಯೇ ಪತ್ರಿಕೆಯಾಗಿದ್ದು, ಸಾಮಾಜಿಕ ತೊಡಕುಗಳ ವಿರುದ್ಧ ಸಮರಸಾರಿ ಎಷ್ಟೇ ಅಡೆ ತಡೆಗಳು ಎದುರಾದರು ಅದನ್ನು ಮುನ್ನೆಲೆಗೆ ತಂದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಕೋಲಾ ತಾಲೂಕು ಕಾರ್ಯನಿರತ ಪತ್ರಸಂಘದ ಅಧ್ಯಕ್ಷ ಅರುಣ ಶೆಟ್ಟಿ ವಹಿಸಿದ್ದರು. ಗೋಖಲೆ ಸೆಂಟನರಿ ಕಾಲೇಜಿನ ಪ್ರಾಂಶುಪಾಲ ಎಸ್ ವಿ ವಸ್ತ್ರದ, ಕೆನರಾ ವೇಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್ ವಿ ಕೇಣಿ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿಭಾಗದ ನಿಟ್ ಪರೀಕ್ಷೆಯಲ್ಲಿ ಸಾಧನೆಗೈದ ಕುಮಾರಿ ಮಾನ್ಯ ನಾಯ್ಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಪತ್ರಕರ್ತ ವಾಸುದೇವ ಗುನಗಾ ಸ್ವಾಗತಿಸಿದರು.ಮೋಹನ್ ದುರ್ಗೆಕರ್ ಸನ್ಮಾನ ಪತ್ರ ವಾಚಿಸಿದರು, ಸುಭಾಷ್ ಕಾರೇಬೈಲ್ ನಿರೂಪಿಸಿದರು, ನಾಗರಾಜ್ ಜಾಂಬಳೆಕರ್ ವಂದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ರಾಘು ಕಾಕರಮಠ, ನಾಗರಾಜ್ ಮಂಜುಗುಣಿ, ಕೆ ರಮೇಶ್, ಅಕ್ಷಯ ನಾಯ್ಕ, ಅನೂಪ್ ಗುನಗಾ ಮುಂತಾದವರು ಉಪಸ್ಥಿತರಿದ್ದರು.