
ಭಟ್ಕಳ: ಬಡವರಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಶನಿವಾರ ಮಧ್ಯಾಹ್ನ ನಡೆದ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕರ ತಂಡವು ರಂಗಿನಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ತಪಾಸಣೆ ನಡೆಸಿದಾಗ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಓಮಿನಿ ಕಾರನ್ನು ತಡೆದು ಪರಿಶೀಲನೆ ನಡೆಸಿದೆ. ಈ ವೇಳೆ ಯಾವುದೇ ಅಧಿಕೃತ ದಾಖಲೆಗಳು ಅಥವಾ ಬಿಲ್ ಇಲ್ಲದೆ ಸುಮಾರು 1,150 ಕೆಜಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದ್ದು, ಅದರ ಅಂದಾಜು ಮೌಲ್ಯ ₹39,000ಕ್ಕೂ ಹೆಚ್ಚು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು, ಅಕ್ಕಿ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡು, ಸ್ಥಳದಲ್ಲೇ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮುಗ್ಧಂ ಕಾಲೋನಿ ನಿವಾಸಿ ಆಸೀಫ್ ಉಲ್ಲಾ ಅಬ್ದುಲ್ ರಹೀಮ್ ಸಾಬ್ (38) ಎಂದು ಗುರುತಿಸಲಾಗಿದೆ.
ವಿಚಾರಣೆಯ ವೇಳೆ, ಈ ಅಕ್ಕಿಯನ್ನು ಶಿರಾಲಿಯ ಮೊಹಮ್ಮದ್ ಸಮೀರ ಅವರಿಗೆ ಒಪ್ಪಿಸಲು ಹನುಮಾನನಗರದ ಆಟೋ ಚಾಲಕ ರಾಮಚಂದ್ರ ಮಾಸ್ತಪ್ಪ ನಾಯ್ಕ ಅವರ ಮೂಲಕ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಬಂಧ ಮೂರು ಮಂದಿ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

