
ಭಟ್ಕಳ:ತಾಲೂಕಿನ ಪುರಾತನ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುರ್ಡೇಶ್ವರದ ಮಾತ್ಹೋಬಾರ ಶ್ರೀ ಮುರುಡೇಶ್ವರ ದೇವರ ಮಹಾರಥೋತ್ಸವವು ಸಾವಿರಾರು ಭಕ್ತರ ಭಕ್ತಿಭಾವ, ಹರ್ಷೋದ್ಘಾರಗಳ ನಡುವೆ ಮಂಗಳವಾರ ಸಂಜೆ ಅತ್ಯಂತ ವೈಭವದಿಂದ ನೆರವೇರಿತು.
ಜನವರಿ 15ರಂದು ಮಕರ ಸಂಕ್ರಾಂತಿಯ ಪವಿತ್ರ ದಿನ ಧ್ವಜಾರೋಹಣದೊಂದಿಗೆ ಆರಂಭಗೊಂಡ ಉತ್ಸವದ ಅಂಗವಾಗಿ ದೇವಾಲಯದಲ್ಲಿ ನಿತ್ಯವೂ ವಿವಿಧ ಧಾರ್ಮಿಕ ವಿಧಿ–ವಿಧಾನಗಳು, ವಿಶೇಷ ಪೂಜೆಗಳು ಹಾಗೂ ಉತ್ಸವಗಳು ನಡೆದವು. ಉತ್ಸವದ ಮುಖ್ಯ ಆಕರ್ಷಣೆಯಾಗಿದ್ದ ಚಿನ್ನದ ರಥೋತ್ಸವ ಸಹ ಭಕ್ತರನ್ನು ಆಕರ್ಷಿಸಿತು. ಉತ್ಸವದ ಅಂತಿಮ ಹಂತವಾಗಿ ಜನವರಿ 20ರಂದು ಮಹಾರಥೋತ್ಸವ ಭಕ್ತಿಪೂರ್ಣ ವಾತಾವರಣದಲ್ಲಿ ಜರುಗಿತು.

ಮಹಾರಥೋತ್ಸವದ ದಿನ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಹೋಮ–ಹವನಗಳು ಹಾಗೂ ವಿಶೇಷ ಪೂಜಾಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಿತು. ಮಧ್ಯಾಹ್ನ ರಥಾರೋಹಣ ನೆರವೇರಿದ ಬಳಿಕ ಸಾವಿರಾರು ಭಕ್ತರು ರಥಕಾಣಿಕೆ ಸಲ್ಲಿಸಿ ರಥೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸಂಜೆ ವೇಳೆಗೆ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಭಕ್ತರ ಘೋಷಣೆಗಳ ನಡುವೆ ರಥವು ಭಕ್ತಿಭಾವದಿಂದ ಸಾಗಿತು.ಈ ಸಂದರ್ಭದಲ್ಲಿ ಸಚಿವ ಸಚಿವ ಮಂಕಾಳ ವೈದ್ಯ, ದೇವಸ್ಥಾನ ದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್‌ಎಸ್‌ಎಸ್ ಮುಖಂಡ ನಾಗರಾಜ ಶೆಟ್ಟಿ, ಹಿರಿಯರಾದ ಎಸ್.ಎಸ್. ಕಾಮತ್, ಎನ್.ಎಸ್. ಭಟ್ರಹಿತ್ಲು, ಮಾವಳ್ಳಿ–1 ಗ್ರಾಮ ಪಂಚಾಯತ್ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ–2 ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಪಡಿಯಾರ್, ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ್ ಹಾಗೂ ಶಿವರಾಮ ಅಡಿಗಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ರಾಜ್ಯ ಮಹಿಳಾ ಕಾರ್ಯದರ್ಶಿ ಕು. ಬೀನಾ ವೈದ್ಯ, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ, ಕೈಕಿಣಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಉದ್ಯಮಿ ಗಣೇಶ್ ಹರಿಕಾಂತ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಭಕ್ತರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆ ಸುಗಮವಾಗಿರಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಮಹೇಶ ಎಂ.ಕೆ., ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್ ಹಾಗೂ ಪಿಎಸ್‌ಐ ಹನುಮಂತ ಬಿರಾದಾರ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಬಂದೋಬಸ್ತ್ ಕೈಗೊಂಡಿತ್ತು.
