ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದ ಯುವ ಪ್ರತಿಭೆ ಸುಮಂತ್ ಮಂಜುನಾಥ್ ನಾಯ್ಕ್ ಅವರು ಕಿರಿಯ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. 2025ರಲ್ಲಿ ನಡೆದ ಕರ್ನಾಟಕ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ರಾಜ್ಯ ಮಟ್ಟದಲ್ಲಿ 2ನೇ ರ‍್ಯಾಂಕ್ ಗಳಿಸಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಮಟ್ಟದಲ್ಲಿ ಹೆಮ್ಮೆಯ ವಿಷಯವಾಗಿದೆ. ಅವರು ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ನಾಯ್ಕ್ ಹಾಗೂ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸುಜಾತಾ ನಾಯ್ಕ್ ದಂಪತಿಯ ಪುತ್ರರು. ಕುಟುಂಬದ ಕಾನೂನು ಹಿನ್ನೆಲೆ ಹಾಗೂ ವಿದ್ಯಾಭ್ಯಾಸದ ಬಗ್ಗೆ ಹೊಂದಿದ್ದ ನಿಷ್ಠೆ, ಇವರ ಸಾಧನೆಗೆ ಬಲವಾದ ಆಧಾರವಾಗಿದೆ ಎಂದು ತಿಳಿದುಬಂದಿದೆ.

ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸುಮಂತ್ ಸಕ್ರಿಯರಾಗಿದ್ದು, ಚೆಸ್ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಸ್ಪರ್ಧಾತ್ಮಕ ಮನೋಭಾವ, ಶ್ರಮ ಹಾಗೂ ಸ್ಪಷ್ಟ ಗುರಿ ಇವರ ಯಶಸ್ಸಿನ ಹಿಂದೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗುತ್ತಿದೆ.
ಇನ್ನೂ 25ರ ಹರೆಯದಲ್ಲೇ ನ್ಯಾಯಾಂಗ ಕ್ಷೇತ್ರದಲ್ಲಿ ಸ್ಥಾನ ಪಡೆಯುವ ಮೂಲಕ ಸುಮಂತ್ ನಾಯ್ಕ್ ಅವರು ಜಿಲ್ಲೆಯ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಈ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ.
