ಭಟ್ಕಳ: ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಗಳಿಗೆ ಜಾಮೀನು ದೊರಕಿಸುತ್ತಿದ್ದ ಜಾಲವನ್ನು ಭಟ್ಕಳ ನಗರ ಪೊಲೀಸರು ಭೇದಿಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

2025 ಜೂನ್ 30ರಂದು ಭಟ್ಕಳದ ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಕ್ರೈಂ ನಂ. 56/2025 ಪ್ರಕರಣದ ಆರೋಪಿಗಳಿಗೆ ಜಾಮೀನು ಪಡೆಯಲು ಕೆಲವರು ಹಾಜರಾಗಿದ್ದರು. ಅವರು ಸಲ್ಲಿಸಿದ್ದ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ಶೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಪರಿಶೀಲಿಸಿದಾಗ ಅವು ನಕಲಿ ಎಂಬುದು ಪತ್ತೆಯಾಗಿದೆ. ಈ ಬೆಳವಣಿಗೆ ತಿಳಿದ ಆರೋಪಿಗಳು ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದರು. ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ಏಪ್ರಿಲ್ 15, 2026ರಂದು ಮಂಗಳೂರಿನ ಮರೋಳಿ ನಿವಾಸಿ ಮಹೇಶ ಬಿ. ಮೋಹನ ನಾಯಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ ಹಾಗೂ ಸಿಬ್ಬಂದಿಗಳಾದ ದಿನೇಶ ನಾಯಕ, ಮಹಾಂತೇಶ ಹಿರೇಮಠ ಭಾಗವಹಿಸಿದ್ದರು.
ಈ ಕಾರ್ಯಾಚರಣೆಯಲ್ಲಿ ಪೊಲೀಸರ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
