
ಭಟ್ಕಳ: ಮಜ್ಲಿಸೆ ಇಸ್ಲಾಹ್ ವ ತಂಝೀಮ್ ವತಿಯಿಂದ ಮಂಗಳವಾರ ರಾತ್ರಿ ನಗರದ ಆಮೀನಾ ಪ್ಯಾಲೇಸ್‌ನಲ್ಲಿ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಪಟ್ಟಣದ ಅಭಿವೃದ್ಧಿ ಸಮಸ್ಯೆಗಳು, ಸಾಮಾಜಿಕ ಶಿಸ್ತು ಹಾಗೂ ಆಡಳಿತ–ಸಾರ್ವಜನಿಕರ ಸಹಕಾರ ಕುರಿತಂತೆ ವ್ಯಾಪಕ ಚರ್ಚೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪಟ್ಟಣದ ಮೂಲಸೌಕರ್ಯ ಸಮಸ್ಯೆಗಳತ್ತ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ, ರಂಗಿನಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆ ಹಾಗೂ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿದರು. ಜೊತೆಗೆ 110 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ವಿಳಂಬ ಹಾಗೂ ಹಬ್ಬದ ಸಂದರ್ಭಗಳಲ್ಲಿ ವಿದ್ಯುತ್ ವ್ಯತ್ಯಯಗಳ ಬಗ್ಗೆ ಹೆಸ್ಕಾಂ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಝೀಮ್ ಪೀರ್ ಖಾದ್ರಿ ಮಾತನಾಡಿ, ಮುಸ್ಲಿಮರು ಧಾರ್ಮಿಕ ಶಿಸ್ತಿನೊಂದಿಗೆ ಆಧುನಿಕ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಯುವಜನತೆ ತಮ್ಮ ಶಕ್ತಿಯನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಮಾತನಾಡಿ, ಮಳೆಗಾಲಕ್ಕೂ ಮುನ್ನ ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಪಟ್ಟಣದಲ್ಲಿ ಕಂಡುಬರುತ್ತಿರುವ ದಡಾರ (ಮೀಸಲ್ಸ್) ರೋಗದ ಬಗ್ಗೆ ಕಳವಳ ವ್ಯಕ್ತಪಡಿಸಿ, ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ರಸ್ತೆ ಅಪಘಾತ ತಡೆಯಲು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ‘ಸನ್ಮಿತ್ರ’ ಕೌನ್ಸೆಲಿಂಗ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಸಾಸಿ ಮಾತನಾಡಿ, ಸರ್ಕಾರಿ ಯೋಜನೆಗಳು ಜನರಿಗೆ ತಲುಪಲು ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಹೇಳಿದರು. ಆರೋಗ್ಯ ಮತ್ತು ಶಿಕ್ಷಣ ಯೋಜನೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಂಘಟನೆಗಳು ಸಹಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಉಪಸಂರಕ್ಷಣಾಧಿಕಾರಿ ಯೋಗೇಶ್, ಕಾಂಗ್ರೆಸ್ ಮುಖಂಡ ರಾಮಾ ಮೋಗೇರ್, ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಆಫ್ತಾಬ್ ಕೋಲಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಂಝೀಮ್ ಹಣಕಾಸು ಕಾರ್ಯದರ್ಶಿ ಮೌಲಾನ ಅಝೀಝುರ್ ರಹ್ಮಾನ್ ನದ್ವಿ ಕುರಾನ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಸ್ವಾಗತಿಸಿದರು. ಹಿರಿಯ ಪತ್ರಕರ್ತ ಎಂ.ಆರ್. ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.
ಸಚಿವರ ಗೈರು: ಅಸಮಾಧಾನ
ಈ ಸಂದರ್ಭದಲ್ಲಿ ರಾಜ್ಯ ಸಚಿವ ಮಂಕಾಳ್ ಎಸ್. ವೈದ್ಯ ಅವರ ಗೈರು ಹಾಜರಿ ಸ್ಥಳೀಯ ಮುಸ್ಲಿಂ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕಾರ್ಯಕ್ರಮದ ದಿನಾಂಕವನ್ನು ಸಚಿವರ ಅನುಕೂಲತೆ ಗಮನದಲ್ಲಿಟ್ಟುಕೊಂಡೇ ನಿಗದಿ ಮಾಡಲಾಗಿದ್ದರೂ ಅವರು ಹಾಜರಾಗದಿರುವುದನ್ನು ಸಂಘಟಕರು ಬೇಸರದಿಂದ ಗಮನಿಸಿದರು.
ಇತರ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಜನಪ್ರತಿನಿಧಿಗಳು, ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಸಮಾನ ಸ್ಪಂದನೆ ನೀಡದಿರುವುದು ಬೇಸರಕಾರಿಯಾಗಿದೆ ಎಂದು ಕೆಲ ಮುಖಂಡರು ಅಭಿಪ್ರಾಯಪಟ್ಟರು. ಈ ಘಟನೆ ಸಾರ್ವಜನಿಕರಲ್ಲಿ ಸಮಾನತೆ ಹಾಗೂ ಸೌಹಾರ್ದತೆ ಕುರಿತು ಪ್ರಶ್ನೆಗಳನ್ನು ಹುಟ್ಟಿಸಿದೆ.ಸ್ಥಳೀಯ ರಾಜಕೀಯ ವಲಯಗಳಲ್ಲಿ ಈ ಅಸಮಾಧಾನ ಮುಂದಿನ ದಿನಗಳಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
