ಭಟ್ಕಳ: ಕಳೆದ ಒಂದು ವರ್ಷದಿಂದ ಖಾಲಿಯಾಗಿದ್ದ ಉಪ ವಿಭಾಗಾಧಿಕಾರಿ (AC) ಹುದ್ದೆಗೆ ರಾಜ್ಯ ಸರ್ಕಾರ ಕೊನೆಗೂ ನೂತನ ಅಧಿಕಾರಿಯನ್ನು ನೇಮಕ ಮಾಡಿದ್ದು, ಜೆ. ಮಹೇಶ್ ಅವರು ಶನಿವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಕಳೆದ ವರ್ಷ ಡಾ. ನಯನ್ ಎನ್. ಅವರ ವರ್ಗಾವಣೆಯ ಬಳಿಕ ಭಟ್ಕಳ ಎಸಿ ಹುದ್ದೆ ತೆರವಾಗಿತ್ತು. ನಂತರ ಶಿರಸಿ ಉಪ ವಿಭಾಗಾಧಿಕಾರಿಯಾಗಿದ್ದ ಕುಮಾರಿ ಕಾವ್ಯರಾಣಿ ಅವರಿಗೆ ಭಟ್ಕಳದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ಅವರೂ ವರ್ಗಾವಣೆಗೊಂಡ ಹಿನ್ನೆಲೆ ಹುದ್ದೆ ಮತ್ತೆ ಖಾಲಿಯಾಗಿತ್ತು.

ಈ ಮಧ್ಯೆ ಹೊನ್ನಾವರ ತಹಶೀಲ್ದಾರ್ ಪ್ರವೀಣ್ ಕರಂಡೆ ಅವರು ಪ್ರಭಾರಿ ಎಸಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಜ್ಯ ಸರ್ಕಾರದ ಇತ್ತೀಚಿನ ವರ್ಗಾವಣೆ ಆದೇಶದಂತೆ ಭಟ್ಕಳಕ್ಕೆ ಆಗಮಿಸಿದ ಜೆ. ಮಹೇಶ್ ಅವರು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ.ಉಪ ವಿಭಾಗಾಧಿಕಾರಿಗಳ ನೇಮಕದಿಂದ ಭಟ್ಕಳ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
