ಮುರುಡೇಶ್ವರ : ಮುರುಡೇಶ್ವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ಹೊಡೆದಾಟ ಮತ್ತು ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಅವರಿಗೆ ಜಿಲ್ಲೆ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಪಾರುಗೊಂಡವರಲ್ಲಿ ಮಾವಳ್ಳಿ ಭಾಗದ ಶೇಖರ ಮಂಜುನಾಥ ನಾಯ್ಕ ಹಾಗೂ ಕೋಣಾರ ಕೆರೆಹಿತ್ತಲದ ಮಿಥುನ್ ಕುಪ್ಪಯ್ಯ ನಾಯ್ಕ ಸೇರಿದ್ದಾರೆ.
ಶೇಖರ ನಾಯ್ಕ ವಿವಿಧ ಗುಂಪು ಘರ್ಷಣೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಭಟ್ಕಳದ ತೆರ್ನಮಕ್ಕಿ ಪ್ರದೇಶದಲ್ಲಿ ನಡೆದ ರಾಜೇಶ ನಾಯ್ಕ ಮೇಲಿನ ಹಲ್ಲೆ ಪ್ರಕರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು. ರೂಮ್ ಕೊಡಿಸುವ ವಿಚಾರದಲ್ಲಿ ನಡೆದ ಗಲಾಟೆ ಸೇರಿ ಹಲವು ಪ್ರಕರಣಗಳಲ್ಲಿ ಅವರ ವಿರುದ್ಧ ಕೇಸು ದಾಖಲಾಗಿತ್ತು.ಇನ್ನೊಂದೆಡೆ, ಮಿಥುನ್ ನಾಯ್ಕ ಕೂಡ ಹಲವು ಹೊಡೆದಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮಾವಳ್ಳಿ-2ರ ಶಾಲೆ ಬಳಿ ಗೌರೀಶ ಜಯಂತ ನಾಯ್ಕ ಮೇಲಿನ ದಾಳಿ ಪ್ರಕರಣ ಸೇರಿ ವಿವಿಧ ಕೇಸುಗಳನ್ನು ಎದುರಿಸುತ್ತಿದ್ದರು.
ಪೊಲೀಸರು ಇಬ್ಬರ ಮೇಲೂ ನಿರಂತರ ನಿಗಾ ಇಟ್ಟು, ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ವರ್ತನೆಯಲ್ಲಿ ಬದಲಾವಣೆ ಕಂಡುಬರಲಿಲ್ಲ. ಈ ಹಿನ್ನೆಲೆಯಲ್ಲಿ ದೀಪನ್ ಎಂ ಎನ್ ಅವರ ಆದೇಶದಂತೆ ಇಬ್ಬರನ್ನೂ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.ಶೇಖರ ನಾಯ್ಕರನ್ನು ತುಮಕೂರು ಜಿಲ್ಲೆಗೆ ಹಾಗೂ ಮಿಥುನ್ ನಾಯ್ಕರನ್ನು ವಿಜಯಪುರ ಜಿಲ್ಲೆಗೆ ಪೊಲೀಸರು ಕರೆದೊಯ್ದು ಬಿಟ್ಟಿದ್ದಾರೆ.
