ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಧಾರ್ಮಿಕ ಮೂರಿನಕಟ್ಟೆ ಮರುನಿರ್ಮಾಣ ವಿಚಾರ ಭಾರೀ ಉದ್ವಿಗ್ನತೆಗೆ ಕಾರಣವಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೂ ಹಲ್ಲೆ ನಡೆದ ಘಟನೆ ಭಾನುವಾರ ವರದಿಯಾಗಿದೆ.ಭಟ್ಕಳದ ಜಾಗಟೆ ಕಟ್ಟೆ ಪ್ರದೇಶದಲ್ಲಿದ್ದ ಐತಿಹಾಸಿಕ ಮೂರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ-66 ಅಗಲೀಕರಣ ಕಾಮಗಾರಿಯ ವೇಳೆ ತೆರವುಗೊಳಿಸಲಾಗಿತ್ತು. ಇತ್ತೀಚೆಗೆ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅದೇ ಸ್ಥಳದಲ್ಲಿ ಮುಂಜಾನೆ ಮೂರಿನಕಟ್ಟೆಯನ್ನು ಮರು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಈ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಭಾನುವಾರ ರಾತ್ರಿ ಸ್ಥಳಕ್ಕೆ ಜಮಾಯಿಸಿದ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರು ಮೂರಿನಕಟ್ಟೆಯನ್ನು ಒಡೆದು ಹಾಕಿದರೆಂದು ತಿಳಿದುಬಂದಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ದಿನ ನಿಷೇಧಾಜ್ಞೆ

ಘಟನೆ ಹಿನ್ನೆಲೆ Bhatkal ನಗರ ಹಾಗೂ Jali ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಮೇ 25ರ ಬೆಳಿಗ್ಗೆ 6 ಗಂಟೆಯಿಂದ ಮೇ 27ರ ಬೆಳಿಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಾಜ್ಞೆಯ ಪ್ರಮುಖ ಅಂಶಗಳು
ಐದುಕ್ಕಿಂತ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರುವುದು ನಿಷೇಧ
ಧರಣಿ, ಪ್ರತಿಭಟನೆ ಹಾಗೂ ಘೋಷಣೆಗಳಿಗೆ ನಿರ್ಬಂಧ
ಕತ್ತಿ, ಲಾಠಿ, ಚಾಕು ಸೇರಿದಂತೆ ಯಾವುದೇ ಮಾರಕಾಸ್ತ್ರಗಳನ್ನು ಹೊತ್ತೊಯ್ಯಲು ಅವಕಾಶ ಇಲ್ಲ
ಸ್ಫೋಟಕ ವಸ್ತುಗಳು ಹಾಗೂ ಕಲ್ಲು ಸಂಗ್ರಹಿಸುವುದಕ್ಕೂ ನಿಷೇಧ

ಪೊಲೀಸರು ಪ್ರದೇಶದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡದಂತೆ ಮನವಿ ಮಾಡಿದ್ದಾರೆ.
