ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಸಂಭವಿಸಿದ್ದ ಕಪ್ಪೆಚಿಪ್ಪು ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ವಿವಿಧ ಮೂಲಗಳಿಂದ ಒಟ್ಟು ಸುಮಾರು ₹1.85 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ ಶಾಸಕ ಮಂಕಾಳ ಎಸ್. ವೈದ್ಯ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಕುಟುಂಬಗಳಿಗೆ ಪರಿಹಾರದ ಚೆಕ್‌ಗಳನ್ನು ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಪ್ರತಿ ಕುಟುಂಬಕ್ಕೂ ₹16.50 ಲಕ್ಷಗಳ ಪರಿಹಾರ ನೀಡಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ₹5 ಲಕ್ಷದಂತೆ ಒಟ್ಟು ₹55 ಲಕ್ಷ ಹಾಗೂ ಮೀನುಗಾರಿಕೆ ಇಲಾಖೆಯಿಂದ ತಲಾ ₹10 ಲಕ್ಷದಂತೆ ಒಟ್ಟು ₹1.10 ಕೋಟಿ ಮಂಜೂರು ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಶಾಸಕ ಮಂಕಾಳ ವೈದ್ಯ ಅವರು ತಮ್ಮ ವೈಯಕ್ತಿಕ ನಿಧಿಯಿಂದ ಪ್ರತಿ ಕುಟುಂಬಕ್ಕೆ ₹1 ಲಕ್ಷದಂತೆ ಒಟ್ಟು ₹11 ಲಕ್ಷ ನೆರವು ನೀಡಿದ್ದಾರೆ. ಜೊತೆಗೆ ಜನತಾ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ತಲಾ ₹50 ಸಾವಿರದಂತೆ ₹5.50 ಲಕ್ಷ ವಿತರಿಸಲಾಗಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ಲಕ್ಷ್ಮಿ ಶಿವರಾಮ ನಾಯ್ಕ ಅವರ ಕುಟುಂಬದ ಪರಿಸ್ಥಿತಿ ವಿಶೇಷವಾಗಿ ಮನಕಲಕುವಂತಿತ್ತು. ಕುಟುಂಬವು ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿಯ ಸಾವಿನ ಬಳಿಕ ನಾಲ್ವರು ಮಕ್ಕಳು ಆಶ್ರಯವಿಲ್ಲದ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆ ಶಾಸಕ ಮಂಕಾಳ ವೈದ್ಯ ಅವರು ಮಕ್ಕಳಿಗಾಗಿ ಮನೆ ನಿರ್ಮಿಸಲು ತಮ್ಮ ವೈಯಕ್ತಿಕ ನೆರವಿನಿಂದ ₹4 ಲಕ್ಷ ಸಹಾಯ ಘೋಷಿಸಿದ್ದಾರೆ. ಸರ್ಕಾರದ ವತಿಯಿಂದಲೂ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಘಟನೆಯ ಕುರಿತು ಮಾತನಾಡಿದ ಮಂಕಾಳ ವೈದ್ಯ, “ಜನರ ದುಃಖದಲ್ಲಿ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಅವರಿಗೆ ಧೈರ್ಯ ತುಂಬಬಹುದು,” ಎಂದು ಹೇಳಿದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಘಟನೆ ಬಳಿಕ ಆಸ್ಪತ್ರೆಯಲ್ಲಿ ಕಂಡ ದುಃಖದ ವಾತಾವರಣವನ್ನು ಸ್ಮರಿಸಿದ ಅವರು, ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡದೇ ಸಂತ್ರಸ್ತ ಕುಟುಂಬಗಳಿಗೆ ನೆರವಾಗುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತ್ರಸ್ತ ಕುಟುಂಬಗಳಿಗೆ ಭಾರಿ ಪ್ರಮಾಣದ ನೆರವು ಒದಗಿಸಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

