ಶಿರಸಿ, ಜೂನ್ 5: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ₹142 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಲ ಸ್ವರೂಪವನ್ನು ಹಾಳು ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.
ನಗರದ ದೀನದಯಾಳ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ವೈದ್ಯರ ನೇಮಕಾತಿ ಹಾಗೂ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇನ್ನೂ ಟೆಂಡರ್ ಕರೆಯದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಕಾರ್ಡಿಯಾಲಜಿ, ನ್ಯೂರಾಲಜಿ, ನೆಫ್ರಾಲಜಿ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಒಳಗೊಂಡ ಆಸ್ಪತ್ರೆಗೆ 2020ರ ನವೆಂಬರ್ 13ರಂದು ಅನುಮೋದನೆ ದೊರೆತಿತ್ತು. ಕಟ್ಟಡ ನಿರ್ಮಾಣಕ್ಕೆ ₹112 ಕೋಟಿ ಹಾಗೂ ವೈದ್ಯಕೀಯ ಉಪಕರಣಗಳಿಗೆ ₹30 ಕೋಟಿ ಮೀಸಲಿರಿಸಲಾಗಿತ್ತು. ಆದರೆ ಉಪಕರಣಗಳ ಖರೀದಿಗೆ ಕಳುಹಿಸಲಾಗಿದ್ದ ₹26 ಕೋಟಿ ಮೌಲ್ಯದ ಪ್ರಸ್ತಾವನೆಯನ್ನು ₹5.20 ಕೋಟಿಗೆ ಇಳಿಸಲಾಗಿದೆ ಎಂದು ಆರೋಪಿಸಿದರು.
ಬಡ ರೋಗಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಒದಗಿಸಲು ಉದ್ದೇಶಿಸಿದ್ದ MRI, CT ಸ್ಕ್ಯಾನ್ ಸೇರಿದಂತೆ ಹಲವು ಪ್ರಮುಖ ವೈದ್ಯಕೀಯ ಸಾಧನಗಳನ್ನು ಕೈಬಿಡಲಾಗಿದೆ ಎಂದು ಅವರು ದೂರಿದರು.
ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗಿದ್ದರೂ ಅಗತ್ಯ ಸಿಬ್ಬಂದಿ ಮತ್ತು ತಜ್ಞ ವೈದ್ಯರ ನೇಮಕಾತಿ ನಡೆದಿಲ್ಲ. ಹೃದಯ ರೋಗ, ನ್ಯೂರಾಲಜಿ ಹಾಗೂ ನೆಫ್ರಾಲಜಿ ವಿಭಾಗಗಳಿಗೆ ತಜ್ಞರ ಕೊರತೆ ಇದೆ ಎಂದು ತಿಳಿಸಿದರು.
ಆರೋಗ್ಯ ಸಚಿವರು ಎರಡು ಬಾರಿ ಶಿರಸಿಗೆ ಭೇಟಿ ನೀಡಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡುವ ಭರವಸೆ ನೀಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರಕ್ರಿಯೆಗಳು ನಡೆದಿಲ್ಲ ಎಂದು ಆರೋಪಿಸಿದರು.
ಈ ವಿಷಯಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವುದಾಗಿ ತಿಳಿಸಿದ ಅವರು, ಆಸ್ಪತ್ರೆಯನ್ನು ಮೂಲ ಮಂಜೂರಾತಿಯ ಪ್ರಕಾರ ಅಭಿವೃದ್ಧಿಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಆನಂದ ಸಾಲೇರ್, ಉಷಾ ಹೆಗಡೆ, ರಮೇಶ್ ನಾಯ್ಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
