ಭಟ್ಕಳ: ವರ್ಗಾವಣೆಯ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾಗಿರುವ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರು ತಾಲೂಕಿನ ಐದು ಸರ್ಕಾರಿ ಶಾಲೆಗಳಿಗೆ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ವಾಟರ್ ಪ್ಯೂರಿಫೈಯರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಟವಾಣಿ, ಮಂಡಳ್ಳಿ, ಗೊರಟೆ ಹಾಗೂ ನೂಝ್ ಸರ್ಕಾರಿ ಶಾಲೆಗಳಿಗೆ ಪ್ಯೂರಿಫೈಯರ್‌ಗಳನ್ನು ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಲ್ಲಾಸ್ ನಾಯಕ್ ಮಾತನಾಡಿ, ಭಟ್ಕಳದಂತಹ ಸೂಕ್ಷ್ಮ ತಾಲೂಕಿನಲ್ಲಿ ಕಡಿಮೆ ಅವಧಿಯಲ್ಲಿಯೇ ಎಲ್ಲ ಹಂತದ ನೌಕರರನ್ನು ಸಮನ್ವಯದಿಂದ ಮುನ್ನಡೆಸಿದ ನಾಗೇಂದ್ರ ಕೊಳಶೆಟ್ಟಿ ಅವರ ಆಡಳಿತ ಕೌಶಲ್ಯ ಶ್ಲಾಘನೀಯವಾಗಿದೆ ಎಂದರು. ವಿವಿಧ ಸರ್ಕಾರಿ ಕಾರ್ಯಗಳು ಹಾಗೂ ಗಣತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ವರ್ಗಾವಣೆಯ ಸಂದರ್ಭದಲ್ಲಿಯೂ ತಮ್ಮ ಸ್ವಂತ ವೆಚ್ಚದಲ್ಲಿ ಶಾಲೆಗಳಿಗೆ ವಾಟರ್ ಫಿಲ್ಟರ್‌ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ತೋರಿರುವುದು ಅಭಿನಂದನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಶೀಲ್ದಾರರ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು, ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸೇವೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಿರುವ ಅವರ ನಡೆ ಇತರ ಅಧಿಕಾರಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಉದಯ್ ಸೂರ್ವೆ, ಸುರೇಶ್ ಮುರುಡೇಶ್ವರ, ಮೋಹನ್ ನಾಯ್ಕ, ಸಹ ಶಿಕ್ಷಕರಾದ ವಿಜಯ ನರ್ವೆಕರ್, ಪ್ರಸಾದ್ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
