ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಕಂಚಿಕೇರಿ ಪ್ರದೇಶದ ವಿದ್ಯಾರ್ಥಿನಿಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಗಾಯತ್ರಿ ನಾಗರಾಜ ನಾಯ್ಕ (19) ಎಂದು ಗುರುತಿಸಲಾಗಿದೆ. ಅವರು ಭಟ್ಕಳದ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ.
ಕುಟುಂಬದವರ ಮಾಹಿತಿಯ ಪ್ರಕಾರ, ಗುರುವಾರದಿಂದ ಗಾಯತ್ರಿ ಕಾಣೆಯಾಗಿದ್ದರು. ಸಂಬಂಧಿಕರು ಹಾಗೂ ಸ್ಥಳೀಯರು ವಿವಿಧ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಬೆಳಕೆ ಕಂಚಿಕೇರಿ ಸಮೀಪದ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಬಳಿಕ ಶವವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಮಾಹಿತಿ ಮತ್ತು ಊಹಾಪೋಹಗಳು ಹರಿದಾಡುತ್ತಿವೆ. ಕಾಲೇಜು ಶುಲ್ಕ ಪಾವತಿ ಸೇರಿದಂತೆ ವೈಯಕ್ತಿಕ ಕಾರಣಗಳ ಬಗ್ಗೆ ಕೆಲವರಿಂದ ಹೇಳಿಕೆಗಳು ಕೇಳಿಬಂದಿದ್ದರೂ, ಈ ಕುರಿತು ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.ಸಾವಿನ ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
