ಶಿರಸಿ: ನವಶಕ್ತಿ ಪೀಠಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಗೆ ನೂತನ ಧರ್ಮದರ್ಶಿ ಮಂಡಳಿ ರಚನೆಯಾಗಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ರವಿ ಬೆಳ್ಳಿಮನೆ ಅಧ್ಯಕ್ಷರಾಗಿ ಹಾಗೂ ಅಶೋಕ ಪವಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಜಿಲ್ಲಾ ನ್ಯಾಯಾಧೀಶರು ನೂತನ ಧರ್ಮದರ್ಶಿಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಐವರು ಧರ್ಮದರ್ಶಿಗಳು ಭಾಗವಹಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ನೂತನ ಧರ್ಮದರ್ಶಿ ಮಂಡಳಿಯಲ್ಲಿ ವಿನಾಯಕ ಎಸ್. ಶೇಟ್, ಕೇಶವ ಹೆಗಡೆ ಯಡಳ್ಳಿ ಹಾಗೂ ಅರ್ಚನಾ ರಾಘವೇಂದ್ರ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ದೇವಸ್ಥಾನದ ಅಭಿವೃದ್ಧಿ, ಭಕ್ತರಿಗೆ ಉತ್ತಮ ಸೌಲಭ್ಯಗಳ ಕಲ್ಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸುಸೂತ್ರ ನಿರ್ವಹಣೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವುದಾಗಿ ನೂತನ ಧರ್ಮದರ್ಶಿ ಮಂಡಳಿ ತಿಳಿಸಿದೆ.

