
ಸಿದ್ದಾಪುರ: ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿದಂಟಕಲ್ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಡಿಕೆ ಬೆಳೆಗಾರರೊಬ್ಬರಿಗೆ ಭಾರೀ ನಷ್ಟ ಉಂಟಾಗಿದೆ. ವಿನಾಯಕ ಹೆಗಡೆ ಅವರಿಗೆ ಸೇರಿದ ಮನೆಯಲ್ಲಿ ಸಂಗ್ರಹಿಸಲಾಗಿದ್ದ 70ಕ್ಕೂ ಹೆಚ್ಚು ಚೀಲಗಳಷ್ಟು ಸಿಪ್ಪೆ ಅಡಿಕೆ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಹಾಗೂ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲೆ ಚುಕ್ಕಿ ರೋಗ ಹಾಗೂ ವಿವಿಧ ಬೆಳೆ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಉಲ್ಲೇಖಿಸಿದರು. ಕೆಲವು ಪ್ರದೇಶಗಳಲ್ಲಿ ಕೊಳೆರೋಗದ ಪರಿಣಾಮ ಇಳುವರಿಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ಬೆಳೆಗಾರರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.ಇಂತಹ ಸಂದರ್ಭದಲ್ಲೇ ಅಗ್ನಿ ಅವಘಡದಿಂದ ಮತ್ತಷ್ಟು ಹಾನಿಗೊಳಗಾದ ರೈತನಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪರಿಹಾರ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು. ಇದರಿಂದ ಸರ್ಕಾರ ರೈತರೊಂದಿಗೆ ನಿಂತಿದೆ ಎಂಬ ವಿಶ್ವಾಸ ಮೂಡಲಿದೆ ಎಂದು ಅಭಿಪ್ರಾಯಪಟ್ಟರು.

ಇನ್ನೊಂದೆಡೆ, ಬೆಳೆಗಾರ ವಿನಾಯಕ ಹೆಗಡೆ ಅವರು ಘಟನೆಯಿಂದ ತಮ್ಮ ಸಂಗ್ರಹದಲ್ಲಿದ್ದ ಬೆಳೆ ಬಹುಪಾಲು ನಾಶವಾಗಿದ್ದು, ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.

