
ಶಿರಸಿ: ಸಮಾಜ ಸೇವೆಯ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಸಂಕಲ್ಪಕ್ಕೆ ಸಿದ್ದಗಂಗಾ ಮಠದ ಪೂಜ್ಯ ಶ್ರೀಗಳ ಆದರ್ಶವೇ ಪ್ರಮುಖ ಪ್ರೇರಣೆಯಾಗಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ , ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ಬದನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟ್ರಸ್ಟ್ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದಗಂಗಾ ಮಠವು “ಅನ್ನ, ಅಕ್ಷರ, ಆಶ್ರಯ” ಎಂಬ ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು. ಶಿಕ್ಷಣದ ಮೂಲಕ ಸಮಾನತೆಯ ಮೌಲ್ಯಗಳನ್ನು ಬೆಳೆಸಿರುವ ಮಠದ ಕಾರ್ಯ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಯಾಗಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯವೇ ದೇಶದ ಭವಿಷ್ಯದ ಬಲವಾಗಿದೆ. ಆರೋಗ್ಯವಂತ ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ಸಮಾಜ ಮತ್ತು ರಾಷ್ಟ್ರದ ಅಮೂಲ್ಯ ಸಂಪತ್ತಾಗಿ ರೂಪುಗೊಳ್ಳುತ್ತಾರೆ. ಇದೇ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ವಿತರಿಸಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಕ್ಷೇತ್ರದ ಜೊತೆಗೆ ಬಸ್ ನಿಲ್ದಾಣಗಳು, ಆಸ್ಪತ್ರೆಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಿಗೂ ಅಗತ್ಯ ನೆರವು ನೀಡುವ ಕಾರ್ಯವನ್ನು ಟ್ರಸ್ಟ್ ನಿರಂತರವಾಗಿ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಸೇವಾ ಮನೋಭಾವ ಮತ್ತು ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸಮಾಜಮುಖಿ ಬದುಕಿನ ಆದರ್ಶಗಳು ತಮ್ಮ ಸೇವಾ ಚಟುವಟಿಕೆಗಳಿಗೆ ಪ್ರೇರಣೆಯಾಗಿವೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ತಮ್ಮಿಂದಾದ ಕೊಡುಗೆಯನ್ನು ನೀಡಬೇಕು ಎಂಬ ಸಂದೇಶವನ್ನು ಈ ಮಹನೀಯರು ನೀಡಿದ್ದಾರೆ ಎಂದು ಅವರು ಹೇಳಿದರು.
ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಮುಖಂಡ ಯುವರಾಜ್ ಗೌಡ ಅವರು ತೋರುತ್ತಿರುವ ಆಸಕ್ತಿ ಶ್ಲಾಘನೀಯವಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಇಂತಹ ನಾಯಕತ್ವ ಗುಣ ಹೊಂದಿದ ವ್ಯಕ್ತಿಗಳು ಮುಂದೆ ಬಂದರೆ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಯುವರಾಜ್ ಗೌಡ, ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಗುರುತಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸುವ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾಗಿದೆ. ಮುಂದೆಯೂ ಇಂತಹ ಸಮಾಜಮುಖಿ ಸೇವೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.ಶಾಲೆಗೆ ಅತ್ಯಾಧುನಿಕ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಶಾಲೆಯ ಎಸ್‌ಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅನಂತಮೂರ್ತಿ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಮಾರುತಿ ಎನ್. ಸಾಳುಂಕೆ, ಶಾಲೆಯ ಎಸ್‌ಎಂಸಿ ಅಧ್ಯಕ್ಷ ರವಿ ಬೋರಳ್ಳಿ, ಬದನಗೋಡು ಗ್ರಾಮ ಪಂಚಾಯಿತಿ ಪಿಡಿಒ ಟಿ.ಪಿ. ಲಂಬಾಣಿ, ಶಿವಪ್ಪ ದುರ್ಗಪ್ಪ ಬೋವಿವಡ್ಡರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
