
ಶಿರಸಿ: ನಗರದ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಮೇಲ್ದರ್ಜೆ ಆಸ್ಪತ್ರೆಯ ಸೌಲಭ್ಯಗಳ ಜಾರಿಗೆ ಸಂಬಂಧಿಸಿದಂತೆ ಕೇಳಲಾಗಿದ್ದ ಪ್ರಶ್ನೆಗಳಿಗೆ ಇದುವರೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯ ದೀನದಯಾಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಅಭಿವೃದ್ಧಿ ಕುರಿತಂತೆ ಹಲವು ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಮುಂದಿಟ್ಟಿದ್ದರೂ ಒಂದು ತಿಂಗಳು ಕಳೆದರೂ ಯಾವುದೇ ಅಧಿಕೃತ ಉತ್ತರ ಲಭ್ಯವಾಗಿಲ್ಲ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಜಿಲ್ಲಾ ಭೇಟಿಯ ಸಂದರ್ಭದಲ್ಲಿಯೂ ಆಸ್ಪತ್ರೆಯ ಸಮಸ್ಯೆಗಳು ಸಮರ್ಪಕವಾಗಿ ಪ್ರಸ್ತಾಪವಾಗಿಲ್ಲ ಎಂದು ಆರೋಪಿಸಿದ ಅವರು, ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ಣಗೊಂಡು ಬಹಳ ಸಮಯ ಕಳೆದಿದ್ದರೂ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಸೇವೆಗಳ ಆರಂಭದಲ್ಲಿ ವಿಳಂಬವಾಗಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಆಸ್ಪತ್ರೆಗೆ ಆರಂಭದಲ್ಲಿ ಸುಮಾರು ₹30 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಯೋಜನೆ ಇತ್ತು. ಆದರೆ ಅದು ಈಗ ₹5.20 ಕೋಟಿಗೆ ಸೀಮಿತಗೊಂಡಿದೆ ಎಂದು ಆರೋಪಿಸಿದ ಅವರು, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೇರಿದಂತೆ ಅಗತ್ಯ ಉಪಕರಣಗಳನ್ನು ತಕ್ಷಣ ಒದಗಿಸಿ, ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಹಾವು ಕಚ್ಚಿ ಮೃತಪಟ್ಟ ಬಾಲಕನ ಪ್ರಕರಣವನ್ನು ಉಲ್ಲೇಖಿಸಿದ ಅನಂತಮೂರ್ತಿ ಹೆಗಡೆ, ತುರ್ತು ಚಿಕಿತ್ಸೆ ವ್ಯವಸ್ಥೆಯ ಕುರಿತು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದೆ ಎಂದು ಹೇಳಿದರು. ಇಂತಹ ಘಟನೆಗಳ ಬಗ್ಗೆ ಜನಪ್ರತಿನಿಧಿಗಳು ಸ್ವತಃ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಜೊತೆಗೆ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಶಿರಸಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ, ನ್ಯೂರೋಲಜಿ, ನೆಫ್ರಾಲಜಿ ಸೇರಿದಂತೆ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳು ಆರಂಭವಾಗಬೇಕು. ಟ್ರಾಮಾ ಸೆಂಟರ್, ಕ್ಯಾಥ್ ಲ್ಯಾಬ್ ಸೇರಿದಂತೆ ಮೇಲ್ದರ್ಜೆಯ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಜಿಲ್ಲೆಯಲ್ಲೇ ಚಿಕಿತ್ಸೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಆಗಸ್ಟ್ 1ರೊಳಗೆ ಆಸ್ಪತ್ರೆ ಅಭಿವೃದ್ಧಿ ಕುರಿತು ಸ್ಪಷ್ಟ ಉತ್ತರ ನೀಡದೇ ಅಗತ್ಯ ಕ್ರಮಗಳನ್ನು ಆರಂಭಿಸದಿದ್ದರೆ ಪಾದಯಾತ್ರೆ, ಧರಣಿ ಸೇರಿದಂತೆ ವಿವಿಧ ಹಂತದ ಹೋರಾಟಗಳನ್ನು ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು. ಜೊತೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕುರಿತು ಹಳ್ಳಿಹಳ್ಳಿಗೆ ತೆರಳಿ ಜಾಗೃತಿ ಅಭಿಯಾನ ನಡೆಸುವುದಾಗಿ ತಿಳಿಸಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಸರ್ಕಾರ ಭರವಸೆಗಳಿಗಿಂತ ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯ ಕ್ಷೇತ್ರದಂತಹ ಪ್ರಮುಖ ಸೇವೆಗಳ ಅಭಿವೃದ್ಧಿಗೆ ತುರ್ತು ಕ್ರಮ ಅಗತ್ಯ ಎಂದು ಹೇಳಿದರು.
ಸುರೇಶ್ ನಾಯ್ಕ ಕಾನಗೋಡ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಮದ್ಯ ಮತ್ತು ಗಾಂಜಾ ಹಾವಳಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬದಲಾವಣೆಯ ನಿರೀಕ್ಷೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ನಿರೀಕ್ಷಿತ ಮಟ್ಟದ ಬದಲಾವಣೆ ತರಬೇಕು ಎಂದು ಹೇಳಿದರು.
ನಾರಾಯಣ ಹೆಗಡೆ ಮತ್ತಿಗಟ್ಟ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಗಾಂವ್ಕರ್, ರಾಘವೇಂದ್ರ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಆಸ್ಪತ್ರೆ ಕುರಿತು ಬಿಜೆಪಿ ಮುಂದಿಟ್ಟ ಪ್ರಮುಖ ಪ್ರಶ್ನೆಗಳು
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿ ಎಂಟು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿತು. ಮೇಲ್ದರ್ಜೆ ಆಸ್ಪತ್ರೆಗೆ ಸಂಬಂಧಿಸಿದ ಮೂಲ ಯೋಜನೆಯಲ್ಲಿ ಬದಲಾವಣೆ ಮಾಡಿರುವ ಕಾರಣ, ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಯ ವಿಳಂಬ, ವೈದ್ಯಕೀಯ ಉಪಕರಣಗಳ ವೆಚ್ಚದಲ್ಲಿ ಕಡಿತ, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ಯಂತ್ರೋಪಕರಣಗಳ ಕೊರತೆ, ಟ್ರಾಮಾ ಸೆಂಟರ್, ಕ್ಯಾಥ್ ಲ್ಯಾಬ್, ನ್ಯೂರೋಲಜಿ ಹಾಗೂ ನೆಫ್ರಾಲಜಿ ವಿಭಾಗಗಳ ಅನುಷ್ಠಾನ ವಿಳಂಬ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಶಾಸಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಯಿತು.
