ಉಡುಪಿ: ಕರ್ನಾಟಕ ಪ್ರೆಸ್ ಕ್ಲಬ್ (ರಿ), ಬೆಂಗಳೂರು ಸಂಘಟನೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸತೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಂಚಾಲಕ ರೂಪೇಶ್ ಕಲ್ಮಾಡಿ ಅವರ ಶಿಫಾರಸಿನ ಹಿನ್ನೆಲೆಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಜಿ. ಅವರು ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ಪತ್ರಿಕಾ ವೃತ್ತಿಯಲ್ಲಿನ ನ್ಯಾಯ, ನೀತಿ, ಸತ್ಯ ಮತ್ತು ಪತ್ರಿಕಾ ಧರ್ಮದ ಮೌಲ್ಯಗಳನ್ನು ಕಾಪಾಡಿಕೊಂಡು ಹೊಸ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸಂಘಟನೆ ಸೂಚಿಸಿದೆ.ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು ನೂತನ ಅಧ್ಯಕ್ಷರ ಪ್ರಮುಖ ಕರ್ತವ್ಯವಾಗಲಿದೆ. ಪತ್ರಕರ್ತರು ಸಂಕಷ್ಟ ಎದುರಿಸಿದ ಸಂದರ್ಭಗಳಲ್ಲಿ ಅವರಿಗೆ ಅಗತ್ಯ ನೆರವು ಒದಗಿಸುವುದರ ಜೊತೆಗೆ, ಅವರ ಹಕ್ಕುಗಳು ಮತ್ತು ವೃತ್ತಿಪರ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವ ಜವಾಬ್ದಾರಿಯೂ ಇರಲಿದೆ.

ಇದರೊಂದಿಗೆ ಸಮಾಜದ ಬಡವರು ಮತ್ತು ದುರ್ಬಲ ವರ್ಗದ ಜನರ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಧ್ವನಿಯಾಗುವುದು, ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಕ್ರಿಯವಾಗಿ ಸ್ಪಂದಿಸುವುದು ಹಾಗೂ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಜನಪರವಾಗಿ ಕಾರ್ಯನಿರ್ವಹಿಸುವಂತೆ ಸಂಘಟನೆ ಆಶಿಸಿದೆ.
ಸತೀಶ್ ಕುಮಾರ್ ಅವರ ನೇಮಕದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ಚಟುವಟಿಕೆಗಳು ಮತ್ತಷ್ಟು ಪರಿಣಾಮಕಾರಿಯಾಗಲಿವೆ ಎಂಬ ನಿರೀಕ್ಷೆಯನ್ನು ಸಂಘಟನೆ ವ್ಯಕ್ತಪಡಿಸಿದೆ.

