

*ಶಿರಸಿ*:ಕಳೆದ ಹಲವು ವರ್ಷಗಳಿಂದ ಜಿಲ್ಲಾ ಪತ್ರಿಕೋದ್ಯಮದಲ್ಲಿ ತಮ್ಮ ದೇ ಆದ ಹೆಜ್ಜೆ ಗುರುತು ಮೂಡಿಸಿರುವ ಪಶ್ಚಿಮ ಘಟ್ಟ ವಾಯ್ಸ್ ಪತ್ರಿಕೆಯ ಸಂಪಾದಕ ಕೃಷ್ಣ.ಎಚ್.ಬಳಿಗಾರ ಇವರನ್ನು ಕರ್ನಾಟಕ ಪ್ರೆಸ ಕ್ಲಬ್ (ರಿ) ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್.ಎಸ್.ಜಿ ಈ ಆದೇಶ ಹೊರಡಿಸಿದ್ದು,ಸಂಘಟನೆ ಜೊತೆಗೆ ಪತ್ರಕರ್ತರ ಹಿತ ರಕ್ಷಣೆಗೆ ಅಹರ್ನಿಶಿ ಶ್ರಮಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಪ್ರೆಸ್ ಕ್ಲಬ್‌ನ ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾರ್ ನಾಯ್ಕ ಅವರ ಶಿಫಾರಸಿನ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾಧ್ಯಕ್ಷ ನಾಗರಾಜ್ .ದೈವಜ್ಞ ಅವರ ಸೂಚನೆ ಮೇರೆಗೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಜಿ. ಅವರು ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪತ್ರಿಕಾ ವೃತ್ತಿಯ ಮೂಲ ಮೌಲ್ಯಗಳಾದ ನ್ಯಾಯ, ಸತ್ಯ, ನೈತಿಕತೆ ಹಾಗೂ ಪತ್ರಿಕಾ ಧರ್ಮವನ್ನು ಗಮನದಲ್ಲಿಟ್ಟುಕೊಂಡು ಹೊಸ ಜವಾಬ್ದಾರಿಯನ್ನು ನಿರ್ವಹಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಶಿರಸಿ ತಾಲೂಕಿನಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ಸಂಘಟನೆಯನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಪತ್ರಕರ್ತರನ್ನು ಸಂಘಟಿಸುವುದು ನೂತನ ಜಿಲ್ಲಾ ಉಪಾಧ್ಯಕ್ಷರ ಪ್ರಮುಖ ಹೊಣೆಗಾರಿಕೆಯಾಗಲಿದೆ. ಪತ್ರಕರ್ತರು ವೃತ್ತಿಯಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ಸಂಕಷ್ಟಗಳ ಸಂದರ್ಭದಲ್ಲಿ ಅಗತ್ಯ ನೆರವು ಹಾಗೂ ಸಹಕಾರ ಒದಗಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.ಇದರ ಜತೆಗೆ ಪತ್ರಕರ್ತರ ಹಕ್ಕುಗಳು ಮತ್ತು ವೃತ್ತಿಪರ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವುದು, ಅವರ ಸಮಸ್ಯೆಗಳನ್ನು ಸಂಬಂಧಪಟ್ಟ ವೇದಿಕೆಗಳ ಗಮನಕ್ಕೆ ತರುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ.ಸಮಾಜದ ಬಡವರು ಹಾಗೂ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ಮುನ್ನೆಲೆಗೆ ತರುವುದು ಮತ್ತು ಭ್ರಷ್ಟಾಚಾರ ಹಾಗೂ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಗಳಿಗೂ ಒತ್ತು ನೀಡುವಂತೆ ಸಂಘಟನೆ ಸೂಚಿಸಿದೆ.
ಹೊಸ ಜವಾಬ್ದಾರಿಯೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಹಿತಾಸಕ್ತಿಗಾಗಿ ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಕರ್ನಾಟಕ ಪ್ರೆಸ್ ಕ್ಲಬ್ ವ್ಯಕ್ತಪಡಿಸಿದೆ.
